ತುಂಬಾ ಚಿಕ್ಕವಯಸ್ಸಿನಿಂದಲೇ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಗಟ್ಟಿಯಾದ ಕನಸು ಇರುತ್ತದೆ – “ನಾನು ಒಳ್ಳೆಯ ಮನುಷ್ಯನಾಗಬೇಕು.” ಈ ಕನಸಿನೊಂದಿಗೆ ಆತನು ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾನೆ. ತಾಯ್ತಂದೆಯ ಮಾತುಗಳನ್ನು ಕೇಳುತ್ತಾನೆ, ಅವರು ಹೇಳಿದಂತೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ. ಯಾಕೆಂದರೆ, ತಾನು ಬೇರೆಯವರಿಗೆ ನೋವು ಕೊಡಬಾರದು ಎಂಬ ನಿಸ್ವಾರ್ಥ ಉದ್ದೇಶದಲ್ಲಿ ಜೀವನ ಸಾಗಿಸುತ್ತಾನೆ.
ಚಿಕ್ಕವಯಸ್ಸಿನಲ್ಲಿ ಶಾಲೆ, ಪಾಠ, ಪರೀಕ್ಷೆ ಈ ಎಲ್ಲದರ ಮಧ್ಯೆಯೂ ಆತನು ಗಟ್ಟಿಯಾಗಿ ಓದಿ, ತನ್ನನ್ನು ತಾನು ರೂಪಿಸಿಕೊಂಡು ಬಯಸುವ ವ್ಯಕ್ತಿತ್ವವನ್ನು ಬೆಳೆಸಲು ಹೆಣೆಯುತ್ತಾನೆ. ಯಾರಾದರೂ ಅವನ ತಂದೆ-ತಾಯಿಗೆ ಕೆಟ್ಟದಾಗಿ ಮಾತಾಡಿದರೂ, ಅದು ಅವನ ಮನಸ್ಸಿಗೆ ತುಂಬಾ ನೋವು ಉಂಟುಮಾಡುತ್ತದೆ. ತಾನೊಬ್ಬ ಒಳ್ಳೆಯ ಮಗನಾಗಬೇಕು, ತನ್ನ ತಂದೆ-ತಾಯಿಗೆ ಹೆಮ್ಮೆ ತರಬೇಕು ಅನ್ನೋ ಆಸೆ ಪ್ರತಿಯೊಬ್ಬನಲ್ಲೂ ಇರುತ್ತದೆ.
ಬಳಿಕ, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಉದ್ದೇಶದಿಂದ, ತನ್ನ ಊರನ್ನು ಬಿಟ್ಟು ಹೊರಗಿನ ಊರಿಗೆ ಹೋಗುತ್ತಾನೆ. ಗೂಡಿನಿಂದ ಹಾರುವ ಹಕ್ಕಿಯಂತೆ ತನ್ನ ಕನಸುಗಳ ಕಡೆಗೆ ಹೆಜ್ಜೆ ಇಡುತ್ತಾನೆ. "ತುಂಬಾ ಕಷ್ಟಪಟ್ಟು ನಾನು ಬೆಳೆಯಬೇಕು, ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು" ಅನ್ನೋ ಗುರಿಯಿಂದ ಕೆಲಸ ಮಾಡುತ್ತಾನೆ.
ಅವನ ಕನಸು ಅಷ್ಟಲ್ಲ – ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು, ಎಲ್ಲರಿಗೂ ಪ್ರೀತಿ ಹಂಚಬೇಕು, ಯಾರಿಗೂ ನೋವು ಕೊಡಬಾರದು. ತನ್ನ ನಡೆ ನಡತೆಯಲ್ಲಿ ಎಲ್ಲಿ ಎಡವಿಕೆ ಆಗದಂತೆ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾನೆ. ಪ್ರತಿಯೊಬ್ಬರೂ “ಇವನು ಒಳ್ಳೆಯ ಮನುಷ್ಯ” ಎಂದು ಹೇಳಬೇಕು ಅನ್ನೋ ಬಲವಾದ ಇಚ್ಛೆಯಿಂದ ಆತನು ನಿರಂತರ ಶ್ರಮಿಸುತ್ತಾನೆ.
ಆದರೆ, ಕೆಲವೊಂದು ಸಮಯದಲ್ಲಿ – ಅಪ್ರತ್ಯಾಶಿತ ಘಟನೆಗಳು, ವ್ಯಕ್ತಿಗಳ ವರ್ತನೆ, ಅಥವಾ ಸಮಾಜದ ಅನ್ಯಾಯಗಳು – ಅವನ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಅವನು ಕಳೆದುಹೋಗುತ್ತಾನೆ, ತಾನೂ ಕೇಳದೇ ತನ್ಮೂಲಕ ಯಾರಿಗಾದರೂ ನೋವುಂಟಾಗಬಹುದು. ಆಗ ಆತನು ನಿಜವಾದ ಜೀವನಪಾಠ ಕಲಿಯುತ್ತಾನೆ – ಒಳ್ಳೆಯವನು ಆಗುವುದು ಕೇವಲ ನಿರ್ಣಯವಲ್ಲ, ಅದು ಪ್ರತಿದಿನದ ಪ್ರಯತ್ನ.
ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತುಂಬಾ ಕಷ್ಟಪಟ್ಟು, ನಾನೊಬ್ಬ ಒಳ್ಳೆಯ ವ್ಯಕ್ತಿಯಾಗಬೇಕು ಎಂದು ಕನಸುಗಳನ್ನು ಕಟ್ಟಿಕೊಂಡು, ಸಹನೆ, ಶ್ರಮ, ಶಿಷ್ಟತೆ ಇವೆಲ್ಲವನ್ನು ಅಳವಡಿಸಿಕೊಂಡು ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಂಡಿರುತ್ತಾನೆ. ಅವನು ಪ್ರತಿಯೊಬ್ಬರೊಂದಿಗೆ ಶ್ರದ್ಧೆಯಿಂದ, ಪ್ರೀತಿಯಿಂದ ವರ್ತಿಸುತ್ತಾನೆ. ಯಾರಿಗೂ ನೋವು ಮಾಡಬಾರದು, ಯಾರಿಂದಲೂ ಕೆಟ್ಟತನ ಹೊಂದಬಾರದು ಎಂಬ ಉದ್ದೇಶದೊಂದಿಗೆ ಬದುಕು ಸಾಗಿಸುತ್ತಾನೆ.
ಆದರೆ, ಕೆಲವೊಮ್ಮೆ ಆತನ ಜೀವನದಲ್ಲಿ ಬರುವ ಕೆಲವೊಂದು ಘಟನೆಗಳು ಆತನ ಆಳವಾದ ಮಾನಸಿಕ ತೀವ್ರತೆಗೆ ಕಾರಣವಾಗುತ್ತವೆ. ಆತನು ತನ್ನ ಹೃದಯದ ನೋವುಗಳನ್ನು ಹಂಚಿಕೊಳ್ಳಲು ನಂಬಿರುವ ಸ್ನೇಹಿತರಿಗೆ ಅಥವಾ ಪ್ರೀತಿಸುವ ವ್ಯಕ್ತಿಗೆ ಹೇಳಿದಾಗ, ಅದೆನ್ನುವನ್ನು ಹಿಡಿದು ಅದನ್ನು ಅವನ ವಿರುದ್ದವೇ ಉಪಯೋಗಿಸಿದಾಗ ಆತನು ತುಂಬಾ ದುಃಖಿಸುತ್ತಾನೆ. ಅವನು ತನ್ನೊಳಗೆ ಮುಚ್ಚಿಕೊಳ್ಳುತ್ತಾನೆ, ಮೌನವಾಗುತ್ತಾನೆ. ತನ್ನ ವ್ಯಕ್ತಿತ್ವವನ್ನೇ ಪ್ರಶ್ನಿಸಲು ಶುರುಮಾಡುತ್ತಾನೆ – "ನಾನು ಏನು ತಪ್ಪು ಮಾಡಿದ್ದೇನೆ?" ಎಂದು.
ಇಷ್ಟೊಂದು ವರ್ಷಗಳ ಕಷ್ಟ, ಶ್ರಮ, ತ್ಯಾಗ ಇವೆಲ್ಲವನ್ನೂ ಮರೆತು, ನಿನ್ನೆಗಿನ ಅವಮಾನ ಅವನನ್ನು ನುಚ್ಚು ನೂರಾಗಿಸುತ್ತವೆ. ಆತನು ಪ್ರೀತಿಸಿದ, ನಂಬಿದ ವ್ಯಕ್ತಿಯಿಂದಲೇ ಅವನನ್ನು ತುಚ್ಛವಾಗಿ ಕಾಣಲಾಗುವುದು ಎಂಬುದು ಅವನ ನಂಬಿಕೆಯನ್ನು, ಆತ್ಮವಿಶ್ವಾಸವನ್ನೇ ನಾಶ ಮಾಡುತ್ತದೆ. “ನಿನ್ನ ನಡತೆ ಸರಿ ಇಲ್ಲ”, “ನೀನು ಯೋಗ್ಯವಿಲ್ಲ”, “ನಿನ್ನ ಹುಟ್ಟಿಗೆ ತಾಯ್ತಂದೆ ಕೇವಲ ಕಾರಣ” ಎಂದು ತೀಕ್ಷ್ಣವಾಗಿ ನಿಂದಿಸಲ್ಪಡುವಾಗ ಅವನು ದಿನವೊಂದಕ್ಕೆ ಕಷ್ಟಪಟ್ಟು ಕಟ್ಟಿಕೊಂಡ ಜೀವನವನ್ನೆಲ್ಲಾ ಪ್ರಶ್ನಿಸಲು ಆರಂಭಿಸುತ್ತಾನೆ.
ಈ ಹೀನ ವಾಕ್ಯಗಳು ಅವನಲ್ಲಿ ಒಳಿತಿಗೆ ಬದಲಾಗಿ ಕೆಟ್ಟತನವನ್ನೇ ಹುಟ್ಟುಹಾಕಬಹುದು. ಅವನು ದಿನದಿಂದ ದಿನಕ್ಕೆ ಮೌನವಾಗುತ್ತಾ, ಹಿಂಸೆಯೊಳಗೆ ಮುಳುಗುತ್ತಾ ತನ್ನ ಕನಸುಗಳನ್ನು, ಆಸೆಗಳನ್ನು ಮರೆಯುತ್ತಾನೆ. “ನಾನೊಬ್ಬ ಒಳ್ಳೆಯವನಾಗಬೇಕು” ಎಂಬ ಉದ್ದೇಶವನ್ನು ಬದಿಗೊತ್ತಿ, "ನಾನೇ ತಪ್ಪು ಇದ್ದೆನೇ?" ಎಂಬ ಆತ್ಮವ್ಯಾಕುಲತೆಗೆ ಒಳಗಾಗುತ್ತಾನೆ.
ಈಗಲೂ ಯಾರಾದರೂ ಅವನನ್ನು “ನೀನು ಸರಿ ಇಲ್ಲ”, “ನಿನ್ನ ವ್ಯಕ್ತಿತ್ವವೇ ತಪ್ಪು” ಎಂದು ಪದೇಪದೇ ಹೇಳಿದರೆ, ಆ ವ್ಯಕ್ತಿಯ ನಂಬಿಕೆಗಳು, ಆತ್ಮವಿಶ್ವಾಸ, ಮತ್ತು ಮನೋಬಲ – ಇವೆಲ್ಲವೂ ನಿಧಾನವಾಗಿ ಕುಸಿದು ಹೋಗುತ್ತವೆ. ಅವನು ತನ್ನೊಳಗಿನ ತಾಳ್ಮೆ, ಶಾಂತಿ, ಗುರಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ.
ಒಳ್ಳೆಯ ಮನುಷ್ಯನಾಗಬೇಕೆಂಬ ಕನಸು ಎಲ್ಲಾ ಜನರಲ್ಲೂ ಇರುತ್ತದೆ. ಆದರೆ ಅದನ್ನು ನಿಜವಾಗಿಸಲು ಶ್ರದ್ಧೆ, ಶಿಸ್ತು ಮತ್ತು ಪ್ರಾಮಾಣಿಕತೆ ಅಗತ್ಯ. ಜೀವನವು ಸವಾಲುಗಳಿಂದ ತುಂಬಿರುವರೂ, ನಮ್ಮೊಳಗಿನ ಮಾನವೀಯತೆ, ಮೌಲ್ಯಗಳು ಮತ್ತು ಸತ್ಯಪಥವೇ ನಿಜವಾದ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ.
ಒಬ್ಬ ವ್ಯಕ್ತಿಯ ನಡತೆ, ವ್ಯಕ್ತಿತ್ವವನ್ನು ತೀರ್ಮಾನಿಸುವ ಮೊದಲು ನಾವು ಅವನು ಎಂತಹ ಸಂಕಟಗಳಿಂದ, ಎಂತಹ ಹೋರಾಟಗಳಿಂದ, ಎಂತಹ ತ್ಯಾಗದಿಂದ ಮುಂದೆ ಬಂದಿದ್ದಾನೆ ಎಂಬುದನ್ನು ತಿಳಿಯಬೇಕಾಗಿದೆ. ಅವನ ಕನಸುಗಳನ್ನು ನಾವು ಅರ್ಥಮಾಡಿಕೊಳ್ಳದೇ ನುಚ್ಚು ನೂರಾಗಿಸಿದರೆ, ಅದು ಕೇವಲ ಅವನ ಜೀವನವನ್ನೇ ಅಲ್ಲ, ಅವನು ಕಟ್ಟಿಕೊಂಡ ನಂಬಿಕೆಗಳನ್ನೂ ಸುಟ್ಟು ಹಾಕುತ್ತದೆ. ಪ್ರತಿಯೊಬ್ಬನ ಹೃದಯದಲ್ಲಿ ತಮ್ಮದೇ ಆದ ನಂಟು, ನೋವು, ನೆನಪುಗಳ ಭಾರವಿದೆ – ಅವುಗಳಿಗೆ ಗೌರವ ನೀಡುವುದು ನಿಜವಾದ ಮಾನವೀಯತೆ.
ಪೃಥ್ವಿರಾಜ್ ಕೊಪ್ಪ.
Comments
Post a Comment