ಮಲೆನಾಡಿನ ರೋಡಿನ ರಾಜ -ಸಹಕಾರ ಸಾರಿಗೆ


ಸಹಕಾರ ಸಾರಿಗೆ ಎಂಬುದು ಕಾರ್ಮಿಕರೇ ಮಾಲೀಕರಾಗಿರುವ ಒಂದು ವಿಶಿಷ್ಟ ಸಂಸ್ಥೆ. ಇದರ ಪ್ರಧಾನ ಕಛೇರಿ ಕೊಪ್ಪ ದಲ್ಲಿದೆ. ಚಿಕ್ಕಮಗಳೂರುಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದರ ಸಾರಿಗೆ ಜಾಲವು ಹರಡಿದೆ. ಸಿಬ್ಬಂದಿಯ ನಗುಮೊಗದ ಸೇವೆ, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಮುಂತಾದ ಸೌಲಭ್ಯಗಳನ್ನು ನೀಡುತ್ತಿರುವುದರಿಂದ ಇದು ಮಲೆನಾಡಿಗರ ಅಚ್ಚುಮೆಚ್ಚಿನ ಸಾರಿಗೆ ವ್ಯವಸ್ಥೆಯಾಗಿದೆ.




ಆಳಾಗಿ ದುಡಿದವನು ಅರಸಾಗಿ ಆಳುವನು-ಎಂಬ ಮಾತಿದೆಯಲ್ಲ ಅದಕ್ಕೆ ಇದು ಉದಾಹರಣೆ ಎನ್ನಬಹುದು.ಒಮ್ಮೆ ಇನ್ನಾರದೋ ಕೈಕೆಳಗೆ ಅಲ್ಪ ವೇತನಕ್ಕೆ ಡ್ರೈವರ್, ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದವರು ಇಂದು ಕೋಟಿಗಟ್ಟಲೆ ವ್ಯವಹಾರವಿರುವ ಸಾರಿಗೆ ಸಂಸ್ಥೆಯ ಮಾಲೀಕರು.ಇವರೇ ಸಂಸ್ಥೆಯ ಕೆಲಸಗಾರರೂ ಕೂಡ ,ಇವರೇ ಮಾಲೀಕರೂ ಕೂಡ.ಇದು ಯಾವುದೂ ಸಿನಿಮಾದ ಕಥೆಯಲ್ಲ, ನಿಜಜೀವನದ ಕಥೆ-ಅದರಲ್ಲಿಯೂ ಈ ಕಥೆ ನನ್ನೂರಿನ ಸಮೀಪದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿನ ಕಥೆ. ೧೯೯೦ ರಲ್ಲಿ ಕೊಪ್ಪದ ಸಾರಿಗೆ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮಗೆ ನೀಡುತ್ತಿದ್ದ ವೇತನ ಸಾಲದೆಂದು ಧರಣಿ ನಡೆಸಿದಾಗ ಆ ಸಂಸ್ಥೆ ಲಾಕೌಟ್ ಘೋಶಿಸಿಬಿಟ್ಟಿತು, ಇದರಿಂದ ಆ ಬದಪಾಯಿಗಳು , ಮತ್ತವರ ಕುಟುಂಬಅಕ್ಷರಶಃ ಬೀದಿಗೆ ಬಿದ್ದಂತಾದರು. ಕೆಲಸ ಮಾಡುತ್ತಿದ್ದ ಸಂಸ್ಥೆ ಅವರಿಗೆ ಸ್ವಲ್ಪ ಪರಿಹಾರವನ್ನೇನೋ ಕೊಟ್ಟಿತ್ತು. ಆದರೆ ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು ಎಂಬಂತೆ ಆ ಹಣ ಇನ್ನೊಂದು ಕೆಲಸ ಸಿಗುವುದರೊಳಗೆ ಖರ್ಚಾಗಿಯೇಬಿಡುವ ಭಯ. ದಾರಿಗಾಣದೆ ತೊಳಲಾಡುತ್ತಿದ್ದಾಗ ನಮ್ಮ ಚಿಕ್ಕಮಗಳೂರಿನವರೇ ಆದ ಕಾರ್ಮಿಕ ಸಂಘದ ಧುರೀಣ ಬಿ ಕೆ ಸುಂದರೇಶ್ ರವರು ಇವರೆಲ್ಲರನ್ನು ಕುರಿತು ನೀವು ಇನ್ನೆಲ್ಲೆಲ್ಲೋ ಕೆಲಸ ಅರಸಿಕೊಂಡು, ಪುನಹ ಇನ್ನಾರದೋ ಕೈಕೆಳಗೆ ದುಡಿಯುವುದರ ಬದಲು ನೀವೆಲ್ಲ ಒಟ್ಟಾಗಿ, ನಿಮಗೀಗ ದೊರೆತಿರುವ ಪರಿಹಾರ ಹಣವನ್ನೇ ಬಂಡವಾಳವನ್ನಾಗಿ ಹಾಕಿಕೊಂಡು ನಿಮ್ಮದೇ ಆದ ಸಾರಿಗೆ ಸಂಸ್ಥೆ ಕಟ್ಟಿ, ನೀವೆಲ್ಲಾ ಒಗ್ಗಟ್ಟಾಗಿ ಶ್ರಮಿಸಿದರೆ ಖಂಡಿತಾ ಅದನ್ನು ಲಾಭದಾಯಕವಾಗಿ ನಡೆಸಬಹುದಲ್ಲದೆ ನೀವೇ ಅದರ ಮಾಲೀಕರೂ ಆಗಿ ನಿಮ್ಮ ಬದುಕನ್ನೂ ಕಟ್ಟಿಕೊಳ್ಳುವುದಲ್ಲದೆ ಇನ್ನಷ್ಟು ಜನರಿಗೆ ಕೆಲಸವನ್ನೂ ನೀಡಬಹುದು ಎಂದು ಸಲಹೆ ನೀಡಿದರು.ಅವರು ಕಟ್ಟಿಕೊಟ್ಟ ಕನಸೇನೋ ಸುಂದರವಾಗಿತ್ತು. 


ಆದರೆ ತಾಳ ತಪ್ಪಿದರೆ ಮುಳುಗುವ ಭಯವೂ ಇತ್ತು. ಆದರೂ ಒಟ್ಟು ೧೫೦ ಮಂದಿ ಕಾರ್ಮಿಕರು ಒಟ್ಟಾಗಿ, ಅಳುಕು ಬಿಟ್ಟು, ಈ ಕನಸನ್ನು ನನಸಾಗಿಸಿಕೊಳ್ಳಲು ದುಡಿಯುವ ನಿರ್ಧಾರ ಕೈಗೊಂಡರು. ತಮ್ಮೆಲ್ಲಾ ಪರಿಹಾರ ಹಣವನ್ನು ಒಟ್ಟಾಗಿಸಿ ಬಂಡಾವಾಳವನ್ನಾಗಿಸಿಕೊಂಡು, ತಮ್ಮ ಹಳೆಯ ಕಂಪೆನಿಯಿಂದ ಓಡಿಸದೆ ನಿಲ್ಲಿಸಿದ್ದ ನಾಲ್ಕು ಬಸ್ ಗಳನ್ನು ಕೊಂಡುಕೊಂಡು ದಿ-೮-೩-೧೯೯೧ರಲ್ಲಿ ತಮ್ಮದೇ ಆದ ಸಾರಿಗೆ ಕಂಪೆನಿಯನ್ನು ತೆರೆದೇ ಬಿಟ್ಟರು.ಒಟ್ಟು ೧೫೦ ಮಂದಿಯಲ್ಲಿ ೩೫ ಜನ ಆಡಳಿತ ನೋಡಿಕೊಳ್ಳಲು, ಉಳಿದವರು ಉಳಿದೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ತೀರ್ಮಾನಿಸಿದರು. ಹಿಂದಿನ ಕಂಪೆನಿಯಲ್ಲಿ ಡ್ರೈವರ್, ಕಂಡಕ್ಟರ್ ಆಗಿ ಎಲ್ಲಾರೀತಿಯ ಅನುಭವಗಳಿದ್ದ ಇವರುಗಳಿಗೆ ಸಾರಿಗೆ ವ್ಯವಸ್ಥೆ, ಬಸ್ ಗಳ ನಿರ್ವಹಣೆ ಇವುಗಳ ಬಗ್ಗೆಆಳವಾದ ಜ್ನ್ಯಾನವಿತ್ತು.ಇದರಿಂದ ಯಾವುದೇ ರೀತಿಯ ಸಮಸ್ಯೆ ಬಂದರೂ ಎದುರಿಸುವುದು ಸುಲಭವಾಗಿತ್ತು. ಅಲ್ಲದೆ ಮಾಲೀಕರೂ ಇವರೇ, ಕೆಲಸಗಾರರೂ ಇವರೇ ಆದುದರಿಂದ ಕೆಲಸಕಾರ್ಯಗಳಲ್ಲಿ ಸೋಮಾರಿತನವಾಗಲೀ, ಮೋಸ, ವಂಚನೆ ಮಾಡುವುದಾಗಲೀ, ಕಾಟಾಚಾರದ ಕೆಲಸ ಮಾಡುವುದಾಗಲೀ, ಬೇಜವಾಬ್ದಾರಿಗಾಗಲೀ ಎಳ್ಳಷ್ಟೂ ಅವಕಾಶವಿಲ್ಲ. ಇದು ನನ್ನದೇ ಕಂಪೆನಿ, ನಾನು ಕಷ್ಟಪಟ್ಟು ದುಡಿದಷ್ಟೂ ಲಾಭ ನನಗೇನೇ ಎಂಬ ಅರಿವು ಆ ಪ್ರತಿಯೊಬ್ಬರಲ್ಲೂ ಕಂಪೆನಿಗಾಗಿ ತಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಿ ಕಾರ್ಯ ನಿರ್ವಹಿಸುವ ಶಕ್ಥಿ ನೀಡಿತ್ತು. ಅವರೆಲ್ಲಾ ಸೇರಿ ಮನಃಪೂರ್ವಕವಾಗಿ ಶ್ರಧ್ಧೆಯಿಂದ ದುಡಿದದ್ದರ,ದುಡಿಯುತ್ತಿರುವುದರ ಫಲವಾಗಿ ಇಂದು ೧೯೯೧ರಲ್ಲಿ ಇವರು ಸ್ಥಾಪಿಸಿದ ಕೊಪ್ಪದ ಸಹಕಾರಸಾರಿಗೆ ಕಂಪೆನಿ ಉಛ್ಛ್ರಾಯ ಸ್ಥಿತಿಯಲ್ಲಿದೆ. ನಾಲ್ಕು ಬಸ್ ಗಳಿಂದ ಪ್ರಾರಂಭವಾದ ಕಂಪೆನಿ ಇಂದು ೮೦ ಬಸ್ ಗಳನ್ನು ಹೊಂದಿದೆ.ತನ್ನದೇ ಆದ ಅತ್ಯುತ್ತಮ ವ್ಯವಸ್ಥೆಯಿಂದ ಕೂಡಿದ ಗ್ಯಾರೇಜ್.ಒಟ್ಟು ೧೨ ವಿಭಾಗಗಳನ್ನು ಹೊಂದಿರುವ ಕಂಪೆನಿಯ ಮುಖ್ಯ ಕಚೇರಿ ಕಟ್ಟಡ, ಚಾಲಕರು, ನಿರ್ವಾಹಕರುಗಳಿಗೆ ವಿಶ್ರಾಂತಿಗಾಗಿ ಕಟ್ಟಡ ಎಲ್ಲವನ್ನೂ ಹೊಂದಿದೆ,ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಾದ್ಯಂತ ತನ್ನ ಹಸಿರು ಬಸ್ಸುಗಳನ್ನು ಓಡಿಸುತ್ತಾ ಮಲೆನಾಡಿನ ಕುಗ್ರಾಮಗಳವರಿಗೂ ಕೂಡ ಸಾರಿಗೆ ಸೌಲಭ್ಯವನ್ನು ಕಲ್ಪಿಸಿರುವ ಹಿರಿಮೆ ಈ ಸಂಸ್ಥೆಯದ್ದು.ಮಲೆನಾಡಿಗರು ಈ ಹಸಿರು ಬಸ್ಸುಗಳನ್ನು "ನಂ ಸಾರಿಗೆ ಬಸ್ಸು" ಎಂದು ಅಭಿಮಾನದಿಂದ ಕರೆಯುವಂತೆ ಮನೆಮಾತಾಗಿರುವ ಈ ಸಂಸ್ಥೆ ಎಲ್ಲಾ ಸಹಕಾರ ಸಂಸ್ಥೆಗಳಂತಲ್ಲದೆ ಹಲವು ವೈಶಿಷ್ಟ್ಯತೆ ಹೊಂದಿದೆ.ಇಂತಹ ಕಾರ್ಮಿಕರೇ ಮಾಲೀಕರೂ ಆಗಿರುವ ಈ ಸಹಕರ ಸಂಸ್ಥೆ ಭಾರತದಲ್ಲಿಯೇ ವಿಶಿಷ್ಟ್ವವಾದುದು ಎಂದು ಗುರುತಿಸಲ್ಪಟ್ಟಿದ್ದು ,ಜಪಾನ್ ಸೇರಿದಂತೆ ಹಲವಾರು ವಿದೇಶಗಳಿಂದ ಈ ಸಂಸ್ಥೆಯ ಕಾರ್ಯ ವೈಖರಿಯನ್ನು ಅಧ್ಯಯನ ಮಾಡಲು ಪ್ರತಿನಿಧಿಗಳು ಭೇಟಿ ನೀಡಿದ್ದಾರೆ.


ಇದಲ್ಲದೆ ಅತಿ ವಿಶಿಷ್ಟವಾದ ಈ ಸಂಸ್ಥೆಯನ್ನು ತಮ್ಮ ಪ್ರಾಜೆಕ್ಟ್ ಗಳಿಗಾಗಿ ಆಯ್ಕೆ ಮಾಡಿಕೊಂಡು ಎಂ ಫಿಲ್, ಪಿ ಹೆಚ್ ಡಿ, ಬಿಕಾಮ್ ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದಾರೆ-ಮಾಡುತ್ತಿದ್ದಾರೆ.೩೦೦ ರರಷ್ಟು ಕೆಲಸಗಾರರು ಈಗ ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,ಇದರಲ್ಲಿ ಬಹಳಷ್ಟು ಹೆಣ್ಣುಮಕ್ಕಳೂ ಕೂಡ ಕೆಲಸ ಮಾಡುತ್ತಿದ್ದಾರೆ.ಇಲ್ಲಿಯ ಮ್ಯಾನೇಜಿಂಗ್ ಡೈರೆಕ್ಟರ್ಸ್ ಪೈಕಿ ಓರ್ವ ಮಹಿಳೆಯೂ ಇದಾರೆಂಬುದೂ ಒಂದು ವಿಶೇಷ, ಸಹಕಾರ ಸಾರಿಗೆ ಸಂಸ್ಥೆ ಹಲವಾರು ಸಾಮಾಜಿಕ ಸೇವಾ್ಕಾರ್ಯಗಳಲ್ಲೂಕೂಡಾ ತನ್ನನ್ನು ತೊಡಗಿಸಿಕೊಂಡಿದೆ. ೧ಪ್ರತಿ ವರ್ಷ ಸುತ್ತಮುತ್ತಲ ಎಲ್ಲಾ ಶಾಲೆಗಳಲ್ಲಿ ಎಸೆಸೆಲ್ ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಮಾಡಲಾಗುತ್ತಿದೆ. ೨- ವಿದ್ಯಾರ್ಥಿಗಳಿಗೆ ಪ್ರಯಾಣ ಶುಲ್ಕದಲ್ಲಿ೫೦% ರಷ್ಟು ವಿನಾಯ್ತಿ ೩-ವಿಕಲಾಂಗ ವಿದ್ಯಾರ್ಥಿಗಳಿಗೆ,,ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಯಾಣಶುಲ್ಕ ಸಂಪೂರ್ಣ ವಿನಾಯ್ತಿ. ೪-ಅಂಗವಿಕಲ ಪ್ರಯಾಣಿಕರು, ಮತ್ತು ವೃಧ್ಧರಿಗೆ ೫೦% ರಷ್ಟು ಪ್ರಯಾಣ ಶುಲ್ಕ ವಿನಾಯ್ತಿನೀಡಲಾಗುತ್ತದೆ. ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಹೊರತರುತ್ತಿದ್ದ "ಇಂಚರ " ಎಂಬ ತ್ರೈಮಾಸಿಕ ಪತ್ರಿಕೆಗೆ ತಪ್ಪದೇ ೧೫ ವರ್ಷಗಳ ಕಾಲ ಈ ಸಂಸ್ಥೆ ಜಾಹೀರಾತು ನೀಡಿ ಬೆಂಬಲಿಸಿದೆ. ಈ ಸಂಸ್ಥೆಗೆ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂಬ ಪ್ರಶಂಸೆಯೊಂದಿಗೆ ಹಲವಾರು ಪ್ರತಿಷ್ಟಿತ ಪ್ರಶಸಿಗಳು ,ಪುರಸ್ಕಾರಗಳು ಲಭಿಸಿವೆ. ನಾನು ಈ ಸಂಸ್ಥೆಯ ವಿವಿಧ ಬಸ್ ಗಳಲ್ಲಿ ೧೮ ವರ್ಷಗಳಷ್ಟು ಸುದೀರ್ಘಕಾಲ, ಪ್ರತಿದಿನ ಪಯಣಿಸಿದ್ದೇನೆ.ಈ ಸಂಸ್ಥೆಯ ಎಲ್ಲಾ ಚಾಲಕರು, ನಿರ್ವಾಹಕರು ಅತ್ಯಂತ ಸೌಜನ್ಯಪೂರ್ಣವಾದ ಸೇವೆಯನ್ನು ಸದಾ ನಗುಮೊಗದಿಂದ ನೀಡುವುದನ್ನು ಕಂಡಿದ್ದೇನೆ.ಏನಾದರೂ ತೊಂದರೆ, ಸಮಸ್ಯೆ ಇದ್ದರೆ ತಿಳಿಸಿದರೆ ಕೂಡಲೇ ಅತ್ಯಂತ ಕಾಳಜಿಯಿಂದ ಅದನ್ನು ಪರಿಹರಿಸುವ ಸೌಜನ್ಯ ಇವರಲ್ಲಿದೆ.ನಾನಂತೂ ಈ ಸಂಸ್ಥೆಯ ಹಲವರು ಕಾರ್ಯಕ್ರಮಗಳಲ್ಲಿ ಅಥಿತಿಯಾಗಿ ಪಾಲ್ಗೊಂಡಿದ್ದೇನೆ.ಈ ಬಸ್ ಪ್ರಯಾಣದ ನನ್ನ ನೂರಾರು ಅನುಭವಗಳನ್ನು ನಾನು "ಬಸ್ಸುಮಾತು" ಎಂಬ ನನ್ನ ಕೃತಿಯೊಂದರಲ್ಲಿ ದಾಖಲಿಸಿ ಈ ಕೃತಿಯನ್ನು ಈ ನನ್ನ ಮೆಚ್ಚಿನ ಸಹಕಾರ ಸಾರಿಗೆ ಸಂಸ್ಥೆಗೇ ಅರ್ಪಣೆ ಮಾಡಿದ್ದೇನೆ. ಕೈ ಕೆಸರಾದರೆ, ಬಾಯಿ ಮೊಸರು,ಒಗ್ಗಟ್ಟಿನಲ್ಲಿ ಬಲವಿದೆ.ಇಫ್ ಯು ಟೇಕ್ ರಿಸ್ಕ್-ಯು ವಿಲ್ ಗೆಟ್ ಸಕ್ಸಸ್ ಎಂಬ ಮಾತುಗಳನ್ನು ಸಾಕ್ಷೀಕರಿಸಿದ ಈ ಸಂಸ್ಥೆಯ ಸದಸ್ಯರು ನಿಜಕ್ಕೂಸ್ಫೂರ್ಥಿಯ ಸೆಲೆ. ಅಭಿನಂದನಾರ್ಹರು. ಈ ಸಂಸ್ಥೆ ಮಲೆನಾಡ ಜನರಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಾ,ಅತ್ಯುತ್ತಮ ಸೇವೆ ನೀಡುತ್ತಾ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳಲಿ

Comments