ಕನ್ನಡ ನಾಡಿನ ಜೀವನದಿ ಕಾವೇರಿ


ನಾಡಿನ ಜನತೆಯ ದಾಹ, ಹಸಿವು ನೀಗಿಸುವ ಕಾವೇರಿ ಮಾತೆಯು ವರ್ಷಕ್ಕೊಮ್ಮೆ ನಡೆಯುವ ತೀಥೋ ದ್ಭವದ ದರ್ಶನಕ್ಕಾಗಿ ಭಕ್ತಾದಿಗಳ ಪ್ರವಾಹವೇ ತಲಕಾವೇರಿ ಯ ಕಡೆಗೆ ಹರಿದು ಬರುತ್ತಾರೆ. ನಿತ್ಯ ನದಿಯಾಗಿ ಹರಿಯುವ ಕಾವೇರಿ ಮಾತೆಯನ್ನು ನೋಡುವುದಕ್ಕಿಂತ ಈ ಕುಂಡದ ನೀರಿನ ಉದ್ಭದ ವೀಕ್ಷಣೆ ಮಾಡುವುದು ಸಾವಿರ ಪಟ್ಟು ಪವಿತ್ರ ಎಂಬುದು ಜನರ ನಂಬಿಕೆ. ಆ ನಂಬಿಕೆಯಂತೆ ಈ ಬಾರಿ ನಾಡಿನ ಜನತೆಗೆ ಅ. 17ರಂದು ನಸುಕಿನ 6.29ಕ್ಕೆ ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ದರ್ಶನ ನೀಡಲಿದ್ದಾಳೆ. ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಸಂದರ್ಭದಲ್ಲಿ ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆ(ಬ್ರಹ್ಮ ಕುಂಡಿಕೆ)ಯಲ್ಲಿ ಕಾವೇರಿ ಮಾತೆಯು ತೀರ್ಥರೂಪಿಣಿಯಾಗಿ ಭಕ್ತಾದಿಗಳಿಗೆ ಕಾಣಿಸುಕೊಳ್ಳುತ್ತಾಳೆ. ದಕ್ಷಿಣ ಭಾರತದ ಪ್ರಮುಖ ನದಿ, ಕಾವೇರಿಯ ಉಗಮ ಸ್ಥಾನ, ತಲಕಾವೇರಿ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ. ಜಿಲ್ಲಾಕೇಂದ್ರವಾದ ಮಡಿಕೇರಿಯಿಂದ ಸುಮಾರು ೪೬ ಕಿ.ಮೀಗಳ ದೂರದಲ್ಲಿ, ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿದೆ.

 ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು 'ತೀರ್ಥೋದ್ಭವ' ಎನ್ನುವರು. ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರು ತ್ತಾರೆ. ಈ ಸ್ಥಳವನ್ನುಶರಪಂಜರ, ಹುಲಿಯ ಹಾಲಿನ ಮೇವು ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ. ತಲಕಾವೇರಿ - ದಕ್ಷಿಣಭಾರತದಲ್ಲಿ ಹರಿಯುವ ಕಾವೇರಿ ನದಿಯ ಉಗಮ ಸ್ಥಾನ. ಕರ್ನಾಟಕ ರಾಜ್ಯದಲ್ಲಿರುವ ಕೊಡುಗೆ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯಲ್ಲಿ ಭಾಗಮಂಡಲದ ಪಶ್ಚಿಮಕ್ಕೆ, ಪಶ್ಚಿಮ ಘಟ್ಟಗಳಲ್ಲಿರುವ ಬ್ರಹ್ಮಗಿರಿಯ ಇಳಿಜಾರಿನಲ್ಲಿ (ಉ.ಅ. 120 25' ; ಪೂ. ರೇ. 750 34') ಇದೆ. ಮಡಿಕೇರಿಯಿಂದ 39 ಕಿಮೀ, ದೂರದಲ್ಲಿರುವ ಭಾಗಮಂಡಲಕ್ಕೂ ತಲಕಾವೇರಿಗೂ 8 ಕಿಮೀ. ಉದ್ದದ ವಾಹನಯೋಗ್ಯ ರಸ್ತೆಯಿದೆ. ಕಾವೇರಿಯ ಉಗಮಸ್ಥಾನ 2' * 2' ಯ ಒಂದು ಪುಟ್ಟ ಕೊಳ. ಇದನ್ನು ಕುಂಡಿಗೆ ಎನ್ನುತ್ತಾರೆ. ಇದರ ಪಕ್ಕದಲ್ಲಿ ಉತ್ತರಕ್ಕೆ 4' ಎತ್ತರದ ಒಂದು ಮಂಟಪವಿದೆ. ಕುಂಡಿಗೆಯ ಮುಂದೆ ಒಂದು ಸಣ್ಣ ಕೊಳವಿದೆ. ಕುಂಡಿಗೆಯಿಂದ ಹೊರಟ ನೀರು ಸಣ್ಣ ಕೊಳ ಸೇರಿ ಅಂತರ್ಗಾಮಿಯಾಗಿ ಹರಿದು ಇನ್ನೊಂದು ಕೊಳವನ್ನು ತುಂಬುತ್ತದೆ. ಪುನಃ ನೀರು ಅಂತರ್ಗಾಮಿಯಾಗಿ ಹರಿದು ಕಣಿವೆಯಲ್ಲಿ ಕಾಣಿಸಿಕೊಂಡು ಮುಂದೆ ಹರಿಯುತ್ತದೆ.

ಕುಂಡಿಗೆಯಲ್ಲಿ ಕಾವೇರಿ ತೀರ್ಥ ಉದ್ಭವವಾಗುವುದೆಂದು ನಂಬಿಕೆಯಿದೆ. ಪ್ರತಿವರ್ಷ ತುಲಾ ಸಂಕ್ರಮಣದಂದು ಬೆಳಗಿನ ನಿಶ್ಚಿತ ಮುಹೂರ್ತದಲ್ಲಿ ಆ ಕುಂಡಿಗೆಯಿಂದ ನೀರು ಉಕ್ಕಿ ಹರಿಯುತ್ತದೆ. ಆ ಸಮಯಕ್ಕೆ ದೇಶದ ಅನೇಕ ಕಡೆಗಳಿಂದ ಹಿಂದೂ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿ ಸ್ನಾನಮಾಡುತ್ತಾರೆ. ತುಲಾ ಸಂಕ್ರಮಣದಿಂದ ವೃಶ್ಚಿಕ ಸಂಕ್ರಮಣದ ವರೆಗೆ ತಲಕಾವೇರಿಯ ಬಳಿ ಜಾತ್ರೆ ನಡೆಯುತ್ತದೆ. ಇಲ್ಲಿ ಯಾತ್ರಿಕರಿಗೆ ಇಳಿದುಕೊಳ್ಳಲು ವಸತಿಗಳುಂಟು. ಇಲ್ಲಿಂದ ಸು. 300 ಅಡಿ ಎತ್ತರದಬ್ರಹ್ಮಗಿರಿಯ ನೆತ್ತಿಯ ಮೇಲೆ ಸಪ್ತಋಷಿಗಳು ಹೋಮ ಮಾಡಿದರೆಂದು ಹೇಳಲಾದ ಏಳು ಸಣ್ಣ ಗುಂಡಿಗಳಿವೆ. ಆಕಾಶ ಶುಭ್ರವಾಗಿರುವಾಗ ಬ್ರಹ್ಮಗಿರಿಯ ತುದಿಯಿಂದ ಬೆಟ್ಟದಪುರದ ಬೆಟ್ಟವೂ ನೀಲಗಿರಿಯೂ ಉತ್ತರದಕುದುರೆಮುಖ ಶಿಖರಗಳೂ ಪಶ್ಚಿಮದಲ್ಲಿ ಘಟ್ಟದ ಕೆಳಗಿನ ಕರಾವಳಿಯಲ್ಲಿ ಹಾವುಗಳಂತೆ ಹರಿಯುವ ನದಿಗಳೂ ಅವುಗಳಿಂದಾಚೆಗೆ ಅರಬ್ಬಿ ಸಮುದ್ರವೂ ಕಾಣುತ್ತವೆ. ಭಾಗಮಂಡಲದಿಂದ ತಲಕಾವೇರಿಗೆ ಹೋಗುವ ೫.೫ ಕಿಮೀ. ದೂರದ ಕಾಲುದಾರಿಯೊಂದುಂಟು. ಇದರ ನಡುವೆ ಭೀಮನಕಲ್ಲು ಎಂಬ ಒಂದು ಭಾರಿಬಂಡೆಯಿದೆ. ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿಗೆ ಬಂದಿದ್ದರೆಂದೂ ಭೀಮ ಊಟಮಾಡುವಾಗ ಅನ್ನದಲ್ಲಿ ಸಿಕ್ಕಿದ ಕಲ್ಲನ್ನು ತೆಗೆದಿಟ್ಟನೆಂದೂ ಅದೇ ಭೀಮನಕಲ್ಲು ಎಂದೂ ಜನರಲ್ಲಿ ನಂಬಿಕೆಯಿದೆ.

ಭೀಮನಕಲ್ಲಿನಿಂದ ಮುಂದುವರಿದರೆ ಸಿಗುವುದು ಸಲಾಮ್ ಕಲ್ಲು. ಟೀಪು ಸುಲ್ತಾನ (ನೋಡಿ) ಕೊಡಗನ್ನು ವಶಪಡಿಸಿಕೊಂಡು ತಲಕಾವೇರಿಯ ದೇವಸ್ಥಾನಗಳನ್ನು ಕೊಳ್ಳೆ ಹೊಡೆಯಲು ಸೈನ್ಯದೊಂದಿಗೆ ಈ ಕಲ್ಲಿನ ವರೆಗೆ ಬಂದನೆಂದೂ ಇಲ್ಲಿ ನಿಂತು ಕಾವೇರಿಗೆ ನಮಸ್ಕರಿಸಿ ಹಿಂದಿರುಗಿದನೆಂದೂ ಪ್ರತೀತಿಯುಂಟು.

ತಲಕಾವೇರಿಯಲ್ಲಿ ಅಗಸ್ತ್ಯ ಋಷಿ ಪ್ರತಿóóಷ್ಠಿಸಿದ್ದೆಂದು ಹೇಳಲಾದ ಲಿಂಗ ಇರುವ ಅಗಸ್ತ್ಯೇಶ್ವರ ದೇವಾಲಯವೂ ಗಣಪತಿ ದೇವಾಲಯವೂ ಇವೆ. ಪರ್ವತ ಶ್ರೇಣಿಗಳು, ಎತ್ತರದ ಕಣಿವೆಗಳು, ಬತ್ತದ ಬಯಲು, ಕಾಫಿ-ಏಲಕ್ಕಿ ತೋಟಗಳು, ಹಸುರು ಕಾಡು-ಇವುಗಳ ನಡುವೆ ಇರುವ ತಲಕಾವೇರಿ ಒಂದು ರಮ್ಯವಾದ ತಾಣ.

Comments