ಭೂಮಿ ಹುಣ್ಣಿಮೆ ಆಚರಣೆ

ಅನ್ನ ಕೊಡುವ ಭೂಮಿ ತಾಯಿಯನ್ನು ಪೂಜಿಸುವ ಹಬ್ಬವೇ ಭೂಮಿ ಹುಣ್ಣಿಮೆ. ಭೂಮಿ ತಾಯಿ ಬಯಕೆಯನ್ನು ತೀರಿಸುವ ವಿಶೇಷ ಆಚರಣೆ ಇದಾಗಿದೆ.

ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಮಣ್ಣಿನ ಎತ್ತಿನ ಮೂರ್ತಿಗಳನ್ನು ತಯಾರಿಸಿ, ಭೂಮಿ ತಾಯಿಯೊಂದಿಗೆ ಪೂಜಿಸಲಾಗುತ್ತದೆ. ಗರ್ಭಿಣಿಯಾದ ಭೂಮಿಯ ಬಯಕೆಯನ್ನು ತೀರಿಸಲು ರೈತಾಪಿ ವರ್ಗ ಕೆಲ ದಿನಗಳಿಂದಲೇ ಸಜ್ಜಾಗುತ್ತದೆ. ಗಾಡಿ, ಕೃಷಿ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳು ವಿವಿಧ ರೀತಿಯ ಅಡುಗೆ ಮಾಡುತ್ತಾರೆ.

ಎಲ್ಲರೂ ಒಂದಾಗಿ ಜಮೀನು, ಗದ್ದೆ, ತೋಟಗಳಿಗೆ ತೆರಳಿ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಹೊಸ ಸೀರೆ, ಒಡವೆ ಹಾಕಿ, ವಿಶೇಷ ಖಾದ್ಯ ಇಟ್ಟು ನೈವೇದ್ಯ ಮಾಡುತ್ತಾರೆ. ಬಳಿಕ ಮನೆ ಮಂದಿಯೆಲ್ಲಾ ಊಟ ಮಾಡುತ್ತಾರೆ. ನಂತರ ಜಮೀನಿಗೆ ಚರಗ ಹಾಕುತ್ತಾರೆ.



 ತಮ್ಮನ್ನು ಸಲಹುವ ಭೂತಾಯಿಗೆ ವಿಶೇಷ ಪೂಜೆ ಮಾಡುವ ಇಲ್ಲಿನ ಜನರು ಹಿಂದಿನ ದಿನದ ರಾತ್ರಿಯೇ ಇದಕ್ಕೆ ತಯಾರಿ ನಡೆಸುತ್ತಾರೆ. ಭೂಮಿ ಹುಣ್ಣಿಮೆಯ ಮೊದಲ ದಿನವೇ ತರಕಾರಿಗಳನ್ನು ಕತ್ತರಿಸಿ, ಅದಕ್ಕೆ ಅಮಟೆಕಾಯಿ ಜೊತೆ ಎಲ್ಲಾ ತರಕಾರಿಯ ಎಲೆಗಳು, ಅರಸಿಣದ ಸೊಪ್ಪನ್ನೂ ಕೂಡ ಹಾಕಿ ಬೇಯಿಸಲಾಗುತ್ತೆ ಇದನ್ನು ಚರಗ ಎನ್ನುತ್ತಾರೆ. ಮುಂಜಾನೆ ಸೂರ್ಯೋದಯದ ಒಳಗೆ ಅದನ್ನು ಚಿತ್ತಾರದ ಭೂಮಿ ಹುಣ್ಣಿಮೆ ಬುಟ್ಟಿಯಲ್ಲಿ ಇಟ್ಟುಕೊಂಡು ಹೊಲಗಳಿಗೆ ಬೀರಲಾಗುತ್ತೆ. ಇದರ ಉದ್ದೇಶ ಇಲಿಗಳು ಹೆಗ್ಗಣಗಳಾದಿಯಾಗಿ ಎಲ್ಲಾ ಜೀವಿಗಳಿಗೂ ಹಬ್ಬದ ಸಂತಸ ಹಂಚುವುದಾಗಿದೆ. ನಂತರ ಆರಂಭವಾಗುವುದು ಪೂಜೆ. ಇಲ್ಲಿ ಕೆಲವರು ಗದ್ದೆಗಳಿಗೆ ಹೋಗಿ ತೆನೆಯನ್ನು ಕಟ್ಟಿ ಅಲ್ಲೇ ಪೂಜೆ ಮಾಡಿ ಊಟ ಮಾಡಿ ಬರುತ್ತಾರೆ. ಭತ್ತದ ಗದ್ದೆ ಇಲ್ಲದವರು ತೆಂಗಿನ ಮರ ಅಥವಾ ಅಡಕೆ ಮರಕ್ಕೆ ಪೂಜೆ ಮಾಡುತ್ತಾರೆ. ವಿಶೇಷವೆಂದರೆ ತೋಟ ಹಾಗೂ ಗದ್ದೆಯಲ್ಲೇ ಊಟ ಮಾಡುತ್ತಾರೆ. ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ವಿಶೇಷ ಎಂದರೆ ಅದು ಭೂಮಿ ಹುಣ್ಣಿಮೆ ಬುಟ್ಟಿ. ಚೌತಿ ಕಳೆದ ಮೇಲೆ ಅಟ್ಟದ ಮೇಲಿನ ಬುಟ್ಟಿಯನ್ನು ಕೆಳಗೆ ಇಳಿಸಲಾಗುತ್ತದೆ. ಆ ಬುಟ್ಟಿಗೆ ಕೆಮ್ಮಣ್ಣು ಬಳಿಯಲಾಗುತ್ತದೆ. ಹಬ್ಬದ ದಿನ ಹತ್ತಿರ ಬರುತ್ತಿರುವಂತೆ ಅದರ ಮೇಲೆ ಚಿತ್ತಾರಗಳನ್ನು ಬಿಡಿಸಲಾಗುತ್ತದೆ. ಭತ್ತದ ದಂಟುವಿನಿಂದ ಮಾಡಿದ ಚಿಕ್ಕ ಬ್ರಷ್‍ಗಳನ್ನು ಮಾಡಿಕೊಂಡು ಹಿಟ್ಟಿನಿಂದ ಮಾಡಿದ ದ್ರಾವಣದಲ್ಲಿ ಅದ್ದಿ ಸೂಕ್ಷ್ಮ ಎಳೆಗಳ ರೀತಿ ಚಿತ್ತಾರ ಬಿಡಿಸಲಾಗುತ್ತದೆ. ಇದನ್ನು ದೀವ ಸಂಸ್ಕೃತಿಯ ಹಸೆಯಲ್ಲೂ ಕಾಣಬಹುದು. ಇದೇ ಬುಟ್ಟಿಯಲ್ಲಿ ಚರಗ ಬೀರಲಾಗುತ್ತದೆ. ಬಳಿಕ ಆಹಾರ ಪದಾರ್ಥಗಳು ಹಾಗೂ ಪೂಜಾ ಪರಿಕರಗಳನ್ನು ಇದರಲ್ಲಿ ಇಟ್ಟುಕೊಂಡು ಹೊಲ ಗದ್ದೆಗಳಿಗೆ ಹೋಗುತ್ತಾರೆ.

ಆದರೆ ಈ ಸಂಪ್ರದಾಯ ಮುಂದಿನ ತಲೆಮಾರಿಗೆ ಹಸ್ತಾಂತರವಾಗುತ್ತಿಲ್ಲ. ಇದೊಂದು ತಲೆಮಾರು ಕಳೆದರೆ ಹಸೆ ಸಂಪ್ರದಾಯದಂತೆ ಭೂಮಿ ಹುಣ್ಣಿಮೆ ಬುಟ್ಟಿ ಕೂಡ ಮರೆಯಾಗಲಿದೆಯೇನೋ ಎಂಬ ಆತಂಕ ಹಿರಿಯರದ್ದು.



Comments