ನೀರಿನ ಮಹತ್ವ ಮತ್ತು ಸಂರಕ್ಷಣೆ


ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನೀರಿನ ಮೇಲೆ ಎರಡು ಪುಟಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ ಎಂಬ ಪ್ರಶ್ನೆಯನ್ನು ಈ ವರ್ಷ ಕೊಡಲಾಗಿತ್ತು. ಇಲ್ಲಿ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ, ಬಾಗಲಕೋಟೆಯ ಅಡ್ನಾಡಿ ಅಪ್ಪಣ್ಣ ಬರೆದ ಪ್ರಬಂಧದ ನಕಲನ್ನು ಕೊಟ್ಟಿದ್ದೇನೆ.

ಕಾಲೇಜಿನವರು ನಮಗ ನೀರಿನ ಮ್ಯಾಲೆ ಒಂದು ಪ್ರಬಂಧ ಬರಿಲಿಕ್ಕೆ ಹೇಳ್ಯಾರ. ನೀರಿನ ಮ್ಯಾಲೆ ಏನಾರ ಬರಿಯುವದು ಅತ್ಯಂತ ತ್ರಾಸದ ಕೆಲಸ. ನೀರಿನ ಮ್ಯಾಲೆ ಎಣ್ಣಿ ತೇಲಿ ಬಿಟ್ಟು ಅದರ ಮ್ಯಾಲೆ ರಂಗೋಲಿಯಿಂದ ಬರೆಯುವದು ಒಂದು ಕಲೆ. ಆದರ ಪರೀಕ್ಷಾ ಹಾಲ್ ದೊಳಗ ಹಾಂಗ ಮಾಡೂದು ಸಾದ್ಯ ಇಲ್ಲ. ಇದಕ್ಕ ಎರಡು ಕಾರಣ ಅವ. ಮೊದಲನೇ ಕಾರಣ ಅಂದರ ಅದನ್ನ ನಮಗ ಕ್ಲಾಸಿನಾಗ ಕಲಿಸಿಲ್ಲ ಮತ್ತs  ಇದು ನಮ್ಮ ಸಿಲೆಬಸ್ ನಾಗ ಇಲ್ಲ. ಎರಡನೇ ಮಹತ್ವದ ಕಾರಣ ಅಂದ್ರ ನಮಗ ಪರೀಕ್ಷಾ ಹಾಲ್ ದೊಳಗ ಕುಡಿಲಿಕ್ಕೆ ನೀರ ಸಹಿತ ಕೊಟ್ಟಿಲ್ಲ. ಅಂದಮ್ಯಾಲೆ ನೀರಿನ ಮ್ಯಾಲೆ ಪ್ರಬಂಧ ಬರೆಯುವದು ಎಂಥಾ ಮಾತೋ! ಹಾಂಗ ಮಾಡಬೇಕಾದ್ರ ಪರೀಕ್ಷಾ ಬ್ಯಾಸಿಗಿ ಬದ್ಲು ಮಳೆಗಾಲದಾಗ ನಡಸೂದು ಛಲೊ.

ಮ್ಯಾಲಿನ ಅಂಶಗಳನ್ನು ಗಮನಿಸಿ ನಾವು ಅಂದ್ರ ಪಿ.ಯು.ಸಿ. ವಿದ್ಯಾರ್ಥಿಗಳು ನೀರಿನ ಮ್ಯಾಲೆ ಪ್ರಬಂಧ ಬರೆಯುದರ ಬದ್ಲು ನೀರಿನ ಬಗ್ಗೆ ಪ್ರಬಂಧ ಬರೆಯಲು ಎಲ್ಲಾ ವಿದ್ಯಾರ್ಥಗಳು ನಿರ್ಧರಿಸೀವಿ. ಮತ್ತ, ನಮ್ಮ ನಿರ್ಧಾರವನ್ನ ಕಾಲೇಜಿನವರು ಒಪ್ತಾರ ಅಂತ ತಿಳಕೊಂಡೀವಿ. ಯಾಕಂದ್ರ ಕಾಲೇಜಿನವರು ಯಾವಾಗ ನೋಡಿದ್ರೂ ವಿದ್ಯಾರ್ಥಿಗಳ ಹಿತಾನೆ ಬಯಸ್ತೀವಿ ಅಂತ ಹೊಯ್ಕೊಳ್ಳತಿರ್ತಾರ.

ಭೌತ ಹಾಗೂ ರಸಾಯನ ಶಾಸ್ತ್ರಗಳ ಪ್ರಕಾರ ನೀರು ಒಂದು ವರ್ಣರಹಿತ, ವಾಸನೆರಹಿತ,ರುಚಿರಹಿತ ದ್ರವ. ಆದ್ರ ನಮಗ ಗೊತ್ತಿದ್ದಂಗ ನೀರಿಗೆ ಹಲವಾರು ಬಣ್ಣಗಳಿವೆ. ಯಮುನಾ ನದಿ ನೀರಿನ ಬಣ್ಣ ನಮಗೆ ಗೊತ್ತಿದ್ದಂತೆ ಕಡುಗಪ್ಪಾಗಿದೆ. ಗಂಗಾ ನದಿ ನೀರಿನ ಬಣ್ಣ ವಿವಿಧ ವರ್ಣದ್ದಾಗಿದೆ ಹಾಗೂ ಸಾಂದ್ರತೆಯಲ್ಲಿ ಬಹು ಪ್ರಕಾರದ್ದಾಗಿದೆ. ತುಂಗಭದ್ರಾ ನದಿ ನೀರು ಮಂತ್ರಾಲಯದಲ್ಲಿ ಕೆಂಪು ಬಣ್ಣದ್ದಾಗಿದೆ. ಇನ್ನs ನಮ್ಮ ಹೆಮ್ಮೆಯ ರಾಜಧಾನಿ ಬೆಂಗ್ಳೂರಿನ ಮೈಸೂರು ರಸ್ತೆಯಲ್ಲಿರುವ ವೃಷಭಾವತಿಯ ನೀರು ಎಮ್ಮೆಯ ಬಣ್ಣವನ್ನು ಹೋಲುತ್ತದೆ.

ರುಚಿಯ ಬಗ್ಗೆಯೂ ರಸಾಯನ ವಿಜ್ಞಾನವು ತಪ್ಪಾಗಿದೆ. ಮೇಲೆ ಹೇಳಿದ ಎಲ್ಲಾ ನದಿಗಳ ನೀರಿಗೆ ವಿಶಿಷ್ಟ ರುಚಿಯಿದೆ. ಕಾಶಿಯಲ್ಲಿರುವ ಗಂಗಾ ನದಿಯ ನೀರಿಗೆ ಸುಟ್ಟ ಬೂದಿಯ ಹಾಗೂ ಕೊಳೆತ ವಾಸನೆಯಿದೆ. ಯಮುನೆಯ ನೀರಿಗೆ ಹಳತಾದ ವಾಸನೆಯಿದೆ.ಭದ್ರೆಗೆ ಮಣ್ಣಿನ ವಾಸನೆಯಿದೆ. ಇನ್ನು ,ವೃಷಭಾವತಿಯ ನೀರೀನ ರುಚಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವವರೂ ನೋಡುವದಿಲ್ಲ. ಯಾಕಂದ್ರ ಅದು ವಾಂತಿ ಬರುವ, ಅನೇಕ ಕ್ರಿಮಿಕೀಟಗಳಿಂದ ಕೂಡಿರುವ ಹಾಗೂ ಅಪಥ್ಯದ ನೀರಿನ ರುಚಿ ಹೊಂದಿರುತ್ತದೆ. ಈ ಎಲ್ಲ ನೀರೂ ಅವುಗಳ ಕರ್ಮ, ಗುಣಧರ್ಮಗಳಂತೆ ನಾರುತ್ತವೆ. ಆದ್ದರಿಂದ ನೀರಿಗೆ ಬಣ್ಣವಿಲ್ಲ, ರುಚಿಯಿಲ್ಲ, ವಾಸನೆಯಿಲ್ಲ ಎಂಬ ಮಾತು ಘಂಟಾಘೋಷವಾಗಿ ತಪ್ಪಾಗುತ್ತದೆ ಎಂದು ಹೇಳಬೇಕಾಗ್ತದ.

ನೀರು ಮೇಲ್ಮಟ್ಟದಿಂದ ಕೆಳಮಟ್ಟಕ್ಕೆ ಹರಿಯುತ್ತದೆ ಎಂದು ಹೇಳುತ್ತಾರೆ. ಕಾವೆರಿ ಕರ್ನಾಟಕದಿಂದ ತಮಿಳುನಾಡಿಗೆ ಹರಿಯುತ್ತದೆ. ತಮಿಳುನಾಡಿನ ಜನರು
ನೀರಿನ ಈ ಮೇಲ್ಮಟ್ಟದಿಂದ ಕೆಳಮಟ್ಟಕ್ಕೆ ಹರಿಯುವ ಅಂಶದ ಬಗ್ಗೆ ಅಸಮಾಧಾನದಿಂದಿದ್ದಾರೆ. ಇದರಿಂದ ಕರ್ನಾಟಕವು ತಮಿಳುನಾಡಿಗಿಂತ ಮೇಲ್ಮಟ್ಟದಲ್ಲಿದ್ದಂತಾಯ್ತು. ಆದರೆ ತಮಿಳರು ಇದನ್ನು ಒಪ್ಪುವದಿಲ್ಲ. ಏಕೆಂದರೆ ತಮಿಳು ಕನ್ನಡಕ್ಕಿಂತ ಹಳೆಯದಾದ, ಸಂಪದ್ಭರಿತವಾದ ಪಾರಂಪರಿಕ ಭಾಷೆಯಾಗಿದೆಯೆಂದು ತಮಿಳರ ವಾದ. ಹಾಗಾಗಿ ನೀರು ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ಹರಿಯುತ್ತದೆ ಎಂಬುದು ಅವರ ವಾದ. ಈ ಅಂಶವನ್ನು ಕಾವೇರಿ ನ್ಯಾಯ ಮಂಡಳಿಯವರು ಗಮನಿಸುವದು ಸೂಕ್ತ.

ನೀರಿನ ಗುಣಧರ್ಮದ ಬಗ್ಗೆಯೂ ಕೆಲ ತಪ್ಪು ಅಭಿಪ್ರಾಯಗಳಿವೆ. ನೀರು ತನ್ನ ಲೆವೆಲ್ ನ್ನು (ಮಟ್ಟವನ್ನು) ಕಂಡುಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ಇದು ತಪ್ಪು. ಈಗ ಕಾವೇರಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕಾವೇರಿಯ ನೀರು ಯಾವಾಗಲೂ ತಮಿಳುನಾಡಿನ ಜನತೆಯ ಮಟ್ಟದಲ್ಲಿದೆ ಅದು ಎಂದೆಂದೂ ಕನ್ನಡಿಗರ ಮಟ್ಟದಲ್ಲಿ ಇಲ್ಲ. ಇದರಿಂದ ನೀರು ಭಾಷಾ ಪರವಾಗಿದೆ ಮತ್ತು ತಮಿಳುನಾಡು ಪರವಾಗಿದೆ, ಅದು ಎಂದೆಂದೂ ಕರ್ನಾಟಕದ ಪರವಾಗಿಲ್ಲ ಎಂದು ತಿಳಿದು ಬರುತ್ತದೆ.

ನೀರಿನ ಇನ್ನೊಂದು ಅನಾರೋಗ್ಯಕರ ಅಂಶಕ್ಕೆ ಬರೋಣ. ನೀರು ಎಲ್ಲ ನೆರೆಹೊರೆ ರಾಜ್ಯಗಳ ವ್ಯಾಜ್ಯಕ್ಕೆ ಪ್ರಮುಖ ಕಾರಣವಾಗಿದೆ. ಈಗ ಕರ್ನಾಟಕ, ತಮಿಳುನಾಡು, ಗೋವಾ ಹಾಗೂ ಆಂಧ್ರಪ್ರದೇಶಗಳನ್ನೇ ತೆಗೆದುಕೊಳ್ಳಿ. ನೀರೊಂದಿಲ್ಲದಿದ್ದರೆ ಇವೆಲ್ಲ ರಾಜ್ಯಗಳು ಸೌಹಾರ್ದಯುತವಾಗಿರುತ್ತಿದ್ದವು. ಬೇರೆ ಸಂದರ್ಭಗಳಲ್ಲಿ ಒಮ್ಮತದಿಂದಿರುತ್ತಿದ್ದ ಈ ರಾಜ್ಯಗಳನ್ನು ಕಾವೇರಿ, ಮಲಪ್ರಭಾ, ಮತ್ತೂ ಕೃಷ್ಣಾ ನದಿಗಳು ಕಚ್ಚಾಡುವಂತೆ ಮಾಡಿವೆ. ಹಾಗಾಗಿ ಹರಿವ ನೀರು ನೆರೆಹೊರೆಯವರೊಂದಿಗೆ ಹೊರೆಯ ವಾತಾವರಣವನ್ನು ನಿರ್ಮಿಸುತ್ತದೆ ಎಂದು ಹೇಳಬೇಕಾಗುತ್ತದೆ.

ನೀರಿನ ಮೇಲೆ ನಾನು ಇನ್ನೊಂದು ಪ್ರಯೋಗವನ್ನು ಮಾಡಿದ್ದೇನೆ. ಎರಡು ಪಾತ್ರೆಗಳನ್ನು ಒಂದು ಟೆಬಲ್ ಮೇಲಿಟ್ಟು, ಒಂದರಲ್ಲಿ ನೀರನ್ನು ಮತ್ತು ಇನ್ನೊಂದರಲ್ಲಿ ಮದ್ಯವನ್ನು ಹಾಕಿದೆ ಹಾಗೂ ಅವುಗಳಲ್ಲಿ ಕೆಲ ಕ್ರಿಮಿ ಕೀಟಗಳನ್ನು ಬಿಟ್ಟೆ. ಮದ್ಯದಲ್ಲಿದ್ದ ಕ್ರಿಮಿಗಳು ಸತ್ತವು ಹಾಗೂ ನೀರಿನಲ್ಲಿದ್ದ  ಕ್ರಿಮಿಗಳು ಬದುಕಿದವು. ಇದರಿಂದ ನಮ್ಮ ಹೊಟ್ಟೆಯಲ್ಲಿದ್ದ ಕ್ರಿಮಿಕೀಟಗಳು ನೀರನ್ನು ಕುಡಿದಾಗ ಬದುಕುತ್ತವೆ ಹಾಗೂ ಮದ್ಯವನ್ನು ಕುಡಿದಾಗ ಸಾಯುತ್ತವೆ ಎಂದಾಯ್ತು. ಹಾಗಾಗಿ ನೀರು ದೇಹಕ್ಕೆ ಹಾನಿಕರ ಮದ್ಯ ಒಳ್ಳೆಯದು ಎಂಬ ಅಂಶ ಸಾಬೀತಾಗುತ್ತದೆ.

ನೀರಿನ ಇನ್ನೂ ಕೆಲ ಅಂಶಗಳ ಬಗ್ಗೆ ನಾವು ಗಮನ ಹರಿಸಿಲ್ಲವೆನಿಸುತ್ತದೆ. ನೀರು ಒಂದು ಅಪಾಯಕಾರಿಯಾದ ದ್ರವ. ಹೇಗೆಂದರೆ ನಾನು ನೀರನ್ನು ವ್ಹಿಸ್ಕಿಯೊಂದಿಗೆ ಬೆರೆಸಿ ಕುಡಿದೆ. ನನಗೆ ಚೆನ್ನಾಗಿ ಮತ್ತೇರಿತು. ನಾನು ನೀರನ್ನು ರಮ್ ನೊಂ  ದಿಗೆ ಬೆರೆಸಿ ಕುಡಿದೆ. ನನಗೆ ಚೆನ್ನಾಗಿ ಮತ್ತೇರಿತು. ನಾನು ನೀರನ್ನು ಎಲ್ಲ ಮತ್ತೇರಿಸುವ ದ್ರವಗಳೊಂದಿಗೆ ಬೆರೆಸಿ ಕುಡಿದೆ. ಪರಿಣಾಮ ಒಂದೇ ಆಗಿತ್ತು. ಆದ್ದರಿಂದ ನೀರು ಕಿಕ್ ಮತ್ತು ಮತ್ತೇರಿಕೆಗೆ ಕಾರಣ ಎಂಬ ನಿರ್ಧಾರಕ್ಕೆ ಬಂದು ನೀರನ್ನು ಕುಡಿಯುವದನ್ನು ಇನ್ನು ಮೇಲೆ ನಿಲ್ಲಿಸಬೇಕೆಂದಿದ್ದೇನೆ.

ನೀರು ಪುಲ್ಲಿಂಗವೋ ಸ್ತ್ರೀ ಲಿಂಗವೋ ಎಂಬ ಅಂಶ ನನ್ನನ್ನು ಬಹುವಾಗಿ ಕಾಡಿದೆ. ನನ್ನ ಪ್ರಕಾರ ನೀರು ಪುಲ್ಲಿಂಗ. ಯಾಕೆಂದರೆ ನೀರೆ ಎನ್ನುವದು ಸ್ತ್ರೀ ಲಿಂಗ. ಆದ್ದರಿಂದ ನೀರು ಪುಲ್ಲಿಂಗವಾಗಿರಲೇಬೇಕು.



ನೀರು ಮನುಷ್ಯನ ದೇಹದ ಬೇಡವಾದ ಜಾಗಗಳಾದ ಕಾಲು, ಸೊಂಟ, ಹೊಟ್ಟೆ, ಪುಪ್ಪಯಸಗಳಲ್ಲಿ ನುಗ್ಗಿ ಸಹಿಸಲಾಗದ ಯಾತನೆಯನ್ನು ಉಂಟು ಮಾಡುತ್ತದೆ. ನೀರು ಬೇಡದ ಜಾಗಗಳಲ್ಲಿ ಹೊಕ್ಕ ಮನುಷ್ಯನನ್ನು ಕೇಳಿದರೆ ಇದು ಸ್ಪಷ್ಟವಾದೀತು. ಆದ್ದರಿಂದ ನೀರು ನದಿ,ಸಂಪು, ಓವ್ಹರ್ ಹೆಡ್ ಟ್ಯಾಂಕ ಹಾಗೂ ಉಳಿದ ಜಲಾಶಯಗಳಲ್ಲಿದ್ದರೇ ಚೆಂದ, ಉಳಿದಲ್ಲಿ ಅದು ಎಲ್ಲಿದ್ದರೂ ಅಪಾಯ.

ನೀರು ನಮ್ಮ ಚಲನಚಿತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಚಲನಚಿತ್ರ ಯಶಸ್ವಿಯಾಗಬೇಕಾದರೆ ನಾಯಕಿ ಮಳೆಯಲ್ಲಿ ಅಥವಾ ಶೊವರ್ ಕೆಳಗಡೆ ಮೈ ಕಾಣುವಂತೆ ನೆನೆಯುವದು ಅವಶ್ಯಕವಾಗಿದೆ. ನೀರು ಚಲನಚಿತ್ರಗಳಲ್ಲಿ ಒಂದು ಮಹತ್ವದ ಗುಣಧರ್ಮವನ್ನು ಪಡೆಯುತ್ತದೆ. ಅದು ನಾಯಕಿ ಹಾಗೂ ಎಲ್ಲ ಸ್ತ್ರೀ ಪಾತ್ರಧಾರಿಗಳನ್ನು ನೆನೆಸಿದರೂ ನಾಯಕನನ್ನು ಎಂದೂ ನೆನೆಸುವದಿಲ್ಲ.

ನೀರು ಗವಳಿಗಳಿಗೆ ಜೀವನಾಡಿ ಇದ್ದಂತೆ. ಈ ದ್ರವವೊಂದಿಲ್ಲದಿದ್ದರೆ ಅವರ ಜೀವನವೇ ನೀರುಪಾಲಾದಂತೆ. ಉಚಿತವಾಗಿ ಸಿಗುವ ನೀರು ಅವರ ಜೀವನಮಟ್ಟವನ್ನು ಬಹುಮಟ್ಟಿಗೆ ಸುಧಾರಿಸಿದೆ.

ಕೃಪೆ: WhatsApp

Comments