ಹುಲಿ ಬಂತು ಹುಲಿ ( ಆ ಮನೆಯ ನೆನಪಿನಲೊಂದು )



ಅದೊಂದು ಸಂಜೆ ಸರಿಸುಮಾರು ಆರು ಗಂಟೆಯಾಗಿತ್ತು ಜೀರುಂಡೆಗಳ ಅಬ್ಬರ ಎಂದಿನಂತೆ ಇರದೆ ಸ್ವಲ್ಪ ಜಾಸ್ತಿಯೇ ಇತ್ತು .
ಸಾಲುಸಾಲಾಗಿ ಹಕ್ಕಿಗಳು ತಮ್ಮ ಗೂಡಿಗೆ ಮರಳುವ ತವಕದಲ್ಲಿ ಇದ್ದವು
ಮೋಡಗಳ ಬಣ್ಣ ಕಡುಕಪ್ಪು ತಿರುಗಿ ಮಳೆ ಬರುವ ಹಾಗೆ ಇತ್ತು
ಹೀಗಿರುವಾಗ
ನಾನು ಎಂದಿನಂತೆ ಜಾನುವಾರುಗಳಿಗೆ ಹುಲ್ಲನ್ನು
ಹಾಕುತ್ತಿದ್ದೆ.
ಅದೇ ಸಮಯದಲ್ಲಿ ಒಂದು ವಿಚಿತ್ರವಾದ ಧ್ವನಿಯಲ್ಲಿ ಅಬ್ಬರಿಸುವುದು ಕೇಳಿಸಿತು
ಮೊದಮೊದಲು ಆ ದ್ವನಿ ಎಲ್ಲೊ ದೂರದಲ್ಲಿ ಕೇಳಿಸುತ್ತಿತ್ತು ಹಾಗಾಗಿ ಸರಿಯಾಗಿ ಯಾವ ಧ್ವನಿ ಎಂದು ತಿಳಿಯಲು ಕಷ್ಟವಾಗಿತ್ತು.
ಸ್ವಲ್ಪ ಸಮಯದ ನಂತರ ಧ್ವನಿ ಹೆಚ್ಚಾಯಿತು ಹಾಗೂ
ತೀರ ಹತ್ತಿರದಲ್ಲಿ ಕೇಳಿಸುತ್ತಿತ್ತು .
ಅಜ್ಜಿ ಹೇಳಿದರು ಇದು ಹುಲಿಯ ಗರ್ಜನೆ
ಹಾಗಾಗಿ ಇದು ಹುಲಿಯ ಧ್ವನಿ ಎಂದು ಖಚಿತವಾಯಿತು
ನನಗೆ ಈ ಅನುಭವ ಮೊದಲನೇ ಬಾರಿ ಆಗಿದ್ದರಿಂದ ಸ್ವಲ್ಪ ಕುತೂಹಲ ಜಾಸ್ತಿಯಾಗಿತ್ತು.
ಆದರೆ ಹಿಂದೆ ಒಮ್ಮೆ ಹುಲಿಯ ವಿಷಯ ಬಂದಾಗ ನೆರೆಹೊರೆಯವರು ಹೇಳುವ ಪ್ರಕಾರ 20 ವರ್ಷಗಳ ಹಿಂದೆ ಈ ಕಾಡಿನಲ್ಲಿ ಹುಲಿ ಇತ್ತು ಆದರೆ ಅದರ ಮೇಲೆ ಯಾವುದೇ ಹುಲಿಯ ಅಥವಾ ಕ್ರೂರ ಪ್ರಾಣಿಗಳು ನಮ್ಮ ಊರಿನ ಕಾಡಿನಲ್ಲಿ ಇಲ್ಲ ಎಂದು.
ಅದೇ ಸಮಯದಲ್ಲಿ ಅಜ್ಜಿ ಅನುಭವದ ಹುಲಿಯಾ ಹಲವಾರು ಕಥೆಗಳನ್ನು ಹೇಳಲು ಶುರುಮಾಡಿತು.
ಇದು ಹುಲಿ ಹೌದೋ ಅಲ್ಲವೋ ಹಾಗೆ ಯಾಕೆ ಬಂದಿದೆ ಅನ್ನೊ ಪ್ರಶ್ನೆ ಉತ್ತರಗಳ ನಡುವೆ ಸಮಯ 8.30 ಆಗಿತ್ತು.
ನಮ್ಮ ಮನೆ ಗದ್ದೆ ಹಾಗೂ ಕಾಡಿನ ಮಧ್ಯಭಾಗದಲ್ಲಿ ಇತ್ತು ನಮ್ಮ ಮನೆಯ ಕೂಗಳತೆ ದೂರದಲ್ಲಿ ಯಾವುದೇ ಮನೆಗಳು ಇರಲಿಲ್ಲ
ದಕ್ಷಿಣ ದಿಕ್ಕು ಇಳಿಜಾರಿನಿಂದ ಕೂಡಿದ್ದು ಉತ್ತರ ದಿಕ್ಕು ಎತ್ತರವಾಗಿ ದಟ್ಟವಾದ ಕಾಡು ಹಬ್ಬಿತು
ಹಾಗೂ ಎತ್ತರ ಪ್ರದೇಶದಲ್ಲಿ
ಕಾಡಿನಲ್ಲಿರುವ ಯಾವುದೇ ಪ್ರಾಣಿ-ಪಕ್ಷಿಗಳ ಕೂಗಿನ ಶಬ್ದವು ನಮಗೆ ತುಂಬಾ ಹತ್ತಿರದಲ್ಲಿ ಕೇಳಿಸುತ್ತಿತ್ತು
ಸುಮಾರು ರಾತ್ರಿ 9ರ ಸಮಯದಲ್ಲಿ ಹುಲಿಯ ಗರ್ಜಿಸುವ ದ್ವನಿ ನಿಂತಿತು
ಅಂದುಕೊಂಡು ಹುಲಿ ಯಾವುದೋ ಪ್ರಾಣಿಯನ್ನು ಹಿಂಬಾಲಿಸಿಕೊಂಡು ಬಂದಿದೆ ಹಾಗೆಯೇ ತನ್ನ ಬೇಟೆಯನ್ನು ಮುಗಿಸಿ ಅದರ ಪಾಡಿಗೆ ಅದು ಹಿಂದಿರುಗಿದೆ ಎಂದು
ಅಜ್ಜಿಯ ಇನ್ನೊಂದಷ್ಟು ಹುಲಿಯ
ಅನುಭವದ ಕಥೆಯನ್ನು ಕೇಳಿ ಮಲಗಿಕೊಂಡೆವು.
ಸರಿಸುಮಾರು 11:30 ರ ರಾತ್ರಿಯಲ್ಲಿ ಮನೆಯ ಪಕ್ಕದಲ್ಲೇ ಹುಲಿಯು ಗರ್ಜಿಸಲು ಆರಂಭಿಸಿತು
ಮನೆಯಲ್ಲಿದ್ದ ನಾಲ್ವರು ಕುಮುಟಿ ಎದ್ದು ಕೂತೆವು
ಕೈ ಕಾಲಿನಲ್ಲಿ ನಡುಕ ಗರ್ಜನೆ ಹೇಗಿತ್ತೆಂದರೆ ಅಂತಹ ಚಳಿಯಲ್ಲಿ ಸಹ ಮೈ ಬೆವರುತ್ತಿತ್ತು
ನಮ್ಮ ಮನೆಯ ಹಿಂದೆಯೇ ದನದ ಕೊಟ್ಟಿಗೆ ಇದ್ದುದ್ದರಿಂದ ಹುಲಿಗೆ ದನದ ವಾಸನೆಸಿಕ್ಕಿ ಮನೆ ಹತ್ತಿರಕ್ಕೆ ಬಂದಿದೆ ಎಂದು ಅಂದುಕೊಂಡೆವು
ಈಗ ಏನು ಮಾಡುವುದು ಗೊತ್ತಾಗಲಿಲ್ಲ ಕೊಟ್ಟಿಗೆಯಲ್ಲಿ ಎರಡು ದನ ಒಂದು ಕರು , ಒಂದು ಎಮ್ಮೆ ಇತ್ತು.
6 ಗಂಟೆಯ ಸಮಯದಲ್ಲಿ ಹುಲಿ ಕೂಗುವಾಗ ನಮ್ಮ ಮನೆಯ ನಾಯಿ ನೀನು ಏನಾದರೂ ಮನೆ ಹತ್ತಿರ ಬಂದರೆ ಅಟ್ಟಾಡಿಸಿಕೊಂಡು ಕಚ್ಚುತ್ತೆನೆ ಎನ್ನುವ ರೀತಿಯಲ್ಲಿ ಕೂಗುತ್ತಿತ್ತು.
ಈ ಸಮಯದಲ್ಲಿ ನಾಯಿ ಕೂಗು ಕೂಡ ಪತ್ತೆ ಇರಲಿಲ್ಲ
ಅಂದುಕೊಂಡು ನಾಯಿ ಹುಲಿಯ ಬಾಯಿ ಆಗಿಹೋಗಿದೆ ದನವನ್ನು ತಿನ್ನಲು ಹೊಂಚು ಹಾಕ್ತಾ ಇದೆ ಎಂದು
ಈಗೇನು ಮಾಡುವುದು



ಏನು ಮಾಡುವುದು ಏನು ಮಾಡುವುದು ಅನ್ನುವಷ್ಟರಲ್ಲಿ
ಅಜ್ಜಿ ಹೇಳಿದರು ಹಿಂದಿನಕಾಲದಲ್ಲಿ ಕ್ರೂರ ಪ್ರಾಣಿಗಳ ರಕ್ಷಣೆಗೆ ಖದಿ ಹಾಗೂ ಬಂದೂಕುನಿಂದ ಜೋರಾಗಿ ಶಬ್ದ ಮಾಡ್ತಿದ್ರಂತೆ ಅದರ ಶಬ್ದ ಕೇಳಿ ಕ್ರೂರ ಪ್ರಾಣಿಗಳು ಮನೆ ಹತ್ತಿರ ಬರ್ತಾ ಇರ್ಲಿಲ್ಲ ಅಂತೆ
ನಮ್ಮ ಮನೆಯಲ್ಲಿ ಕೇಪಿನ ಕೋವಿ ಇತ್ತು ಆದರೆ
ಬಳಸದೆ ತುಕ್ಕು ಹಿಡಿದು ಕೂತಿತ್ತು ಯಾಕೆ ಬಳಸುತ್ತಿರಲಿಲ್ಲ ಅಂತ ಹೇಳಿದರೆ ಅದಕ್ಕೊಂದು ದೊಡ್ಡ ಕಥೆ ಇದೆ ಆ ಕತೆ ಮತ್ತೊಮ್ಮೆ ಹೇಳ್ತೀನಿ
ಬಂದೂಕು ಅಂದ್ರೆ ಎಲ್ಲರಿಗೂ ಗೊತ್ತು
ಹಲವಾರು
ಜನರಿಗೆ ಖದಿ ಅಂದ್ರೆ ಏನು ಅಂತ ಗೊತ್ತಿಲ್ಲ
ಖದಿ ಅಂದರೆ ಒಂದು ದೊಡ್ಡ ಕಬ್ಬಿಣದ ಕುಟ್ಟಾಣಿ ರೀತಿಯ ವಸ್ತು ಹೆಚ್ಚುಕಮ್ಮಿ ಒಂದು ಅಡಿ ಎತ್ತರವಿದ್ದು ಒಂದು ಬದಿ ಮಾತ್ರಹೆಬ್ಬೆರಳು ಹೋಗುವ ಗಾತ್ರದ ರಂಧ್ರವಿದ್ದು ಕೊನೆಯಲ್ಲಿ ಹಿಡಿ ಕಡ್ಡಿ ಹೋಗುವ ಗಾತ್ರದ ರಂದ್ರ ಇರುತ್ತಿತ್ತು
ಹಿಂದಿನವರು
ಇದಕ್ಕೆ ರಂಜಕವನ್ನು ಬಳಸಿ ಶಬ್ದವನ್ನು ಹೊರಹೊಮ್ಮು ಸುತ್ತಿದ್ದರು
ಈಗಿನ ಗರ್ನಲ್ ಪಟಾಕಿ ಅಷ್ಟೇ ಶಬ್ದವು ಹೊರಹೊಮ್ಮುತ್ತಿತ್ತು
ಖದಿ ಕೂಡ ಉಪಯೋಗ ಮಾಡದೇ ಅಟ್ಟದ ಮೇಲೆ ತುಕ್ಕು ಹಿಡಿದು ಕೂತಿತ್ತು
ಇನ್ನೇನು ಅನ್ನುವಷ್ಟರಲ್ಲಿ ತೋಟಕ್ಕೆ ಬರುವ ಮಂಗನನ್ನು ಓಡಿಸಲು ತಂದಿಟ್ಟಿರುವ ನಾಲ್ಕೈದು ಹೋಲಿ ಪಟಾಕಿ ಸಿಕ್ಕವು
ಅದನ್ನ ಕಿಟಕಿಯಿಂದ ಹಚ್ಚಿ ಹೊರ ಬಿ ಸಾಕಿದೆವು
ಸ್ವಲ್ಪ ಸಮಯದ ನಂತರ ಹುಲಿಯ ಗರ್ಜನೆ ನಿಂತಿತು.
ಆದರೂ ಕೂಡ ಎಲ್ಲಿಲ್ಲದ ಭಯ
ಶಿವರಾತ್ರಿಯ ದಿನವೂ ಕೂಡ ಜಾಗರಣೆ ಮಾಡದೇ ಇರುವವರು ಅಂದು ಬೆಳಗಿನವರೆಗೆ ಜಾಗರಣೆ ಮಾಡಿದೆವು
ಬೆಳಗ್ಗೆ ಆಯ್ತು ಮುಂದಿನ ಹಾಗೂ ಹಿಂದಿನ ಬಾಗಿಲು ತೆರೆಯಲು ಕೂಡ ಭಯ
ಹೇಗೋ ಧೈರ್ಯ ಮಾಡಿ ಬಾಗಿಲು ತೆರೆದು ಹೊರಗೆ ಬಂದೆ
ಮೊದಲು ಕೊಟ್ಟಿಗೆಗೆ ಹೋದೆ ಅಲ್ಲಿ ಎಲ್ಲಾ ದನಕರುಗಳು ಎಮ್ಮೆ ಬೆಚ್ಚಿ ಬೆದರಿ ನಿಂತಿದ್ದವು.
ನಾಯಿಯನ್ನು ಹುಡುಕಿದೆ ಎಲ್ಲೂ ಕಾಣಲಿಲ್ಲ
ಅಂದುಕೊಂಡೆ ನಾಯಿ ಹುಲಿಯ ಆಹಾರವಾಗಿದೆ ಎಂದು
ಹಲವಾರು ಬಾರಿ ಕರೆದೆ ನಾಯಿಯ ಪತ್ತೆ ಇರಲಿಲ್ಲ
ಅಡಿಕೆ ಬೇಯಿಸುವ ಓಲೆಯನ್ನು ಒಮ್ಮೆ ನೋಡಿದೆ
ನಾಯಿಯ ಬರೀ ಕಾಲು ಎರಡು ಕಾಣುತ್ತಾ ಇತ್ತು
ಕಾಲಿಗೆ ಕೈಕೊಟ್ಟು ನಾಯಿಯನ್ನು ಹೊರಗಡೆ ಎಳೆದನು ನಾಯಿ ಬೆಚ್ಚಿಬೆದರಿ ಹೋಗಿತ್ತು.
ನನ್ನನ್ನು ನೋಡಿದ ನಾಯಿ ಖುಷಿ ತಡೆಯಲಾಗಲಿಲ್ಲ
ಪಟಪಟನೆ ಕಿವಿಯನ್ನು ಬಡಿದುಕೊಂಡು ಮನೆಯನ್ನೊಮ್ಮೆ ಸುತ್ತು ಬಂದಿತು.
ಇನ್ನೇನು ಹುಲಿ ಓಡಿಹೋಯಿತು ಅಂದುಕೊಂಡು ದಿನನಿತ್ಯದ ಕೆಲಸವನ್ನು ಶುರು ಮಾಡಿದೆವು
ದಿನನಿತ್ಯದ ಕೆಲಸ ಎಂದರೆ ಇಷ್ಟ
ಬೆಳಿಗ್ಗೆ ಎದ್ದು ಒಂದು ತೊಟ್ಟು ಕಾಫಿ ಕುಡಿದು ಸೊಪ್ಪಿಗೂ ಅಥವಾ ದರಗಿಗೂ ಹೋಗುವುದು
ಗದ್ದೆ ತೋಟ ಒಂದು ಸುತ್ತು ಹೊಡೆಯುವುದು
ಮಧ್ಯಾಹ್ನ ಸ್ವಲ್ಪ ಉಂಡುಕೊಂಡು ಒಂದರ್ಧ ಗಂಟೆ ಮಲಗುವುದು
ಗದ್ದೆ ಕೊಯ್ಲು ಆಗಿದ್ದುದರಿಂದ ಗದ್ದೆಯಲ್ಲಿ
ಸಂಜೆ ಗಳಿಗೆಗೆ ಕ್ರಿಕೆಟ್ ಆಡುವುದು.
ಹೀಗಿರುವಾಗ ಆ ದಿನ ತೋಟದಲ್ಲಿ ಸೋಗೆಯ ಹಾಳೆ ಕಟ್ಟುವ ಎಂದು ಹಿಂದಿನ ದಿನವೇ ತೀರ್ಮಾನವಾಗಿತ್ತು
ಹಾಗೆಯೇ ಹಾಳೆ ಕಟ್ಟಲು ಸುಲಭವಾಗಲೆಂದು ಹಿಂದಿನ ದಿನವೇ ಹಾಳೆಯ ಮೇಲೆ ನೀರು ಹಾಕಿ ಬಂದಿದ್ದೆ
ಹಾಗಾಗಿ ತೋಟಕ್ಕೆ ಹೋಗಿ ಹಾಳೆಹೊರೆ ಕಟ್ಟಲು ಶುರು ಮಾಡಿದೆ
ಸುಮಾರು 12ರವರೆಗೆ ಹಾಳೆ ಹೊರೆಯನ್ನು ಕಟ್ಟಿ
ಒಂದು ಹೊರೆ ಹಾಳೆಯನ್ನು ಹೊತ್ತುಕೊಂಡು
ತೋಟದ ಬೇಲಿ ದಾಟಿ ಮನೆಗೆ ಬರುತ್ತಿದ್ದೆ.
ಅದೇ ಸಮಯದಲ್ಲಿ
ಗದ್ದೆಯ ಮಧ್ಯದಲ್ಲಿ ಕಿರುಚುವ ಶಬ್ದ ಕೇಳಿತು
ಆ ಕಡೆ ತಿರುಗಿ ನೋಡಿದರೆ ಹುಲಿ ನಮ್ಮ ಮನೆಯ ಕರುವಿನ ಕುತ್ತಿಗೆಯ ನಾಳವನ್ನು ಹಿಡಿದಿದ್ದು
ಕರು ಜೋರಾಗಿ ಕೂಗುತ್ತಿತ್ತು
ನಾನು ಹಾಗೆಯೇ ಇದು ಕನಸೋ ನನಸೋ ಎಂಬುವ ರೀತಿಯಲ್ಲಿ ನೋಡುತ್ತಾ ನಿಂತಿದ್ದೆ
ನೇರವಾಗಿ ಹುಲಿ ನೋಡಿದ್ದು ನಾನು ಪ್ರಾಣಿ ಸಂಗ್ರಹಾಲಯದಲ್ಲಿ ಮಾತ್ರ
ನನಗೂ ಹುಲಿಗೂ ಹೆಚ್ಚುಕಮ್ಮಿ ಐವತ್ತು ಅಡಿ ದೂರ ಇತ್ತು .
ನನಗೆ ಏನು ಅನಿಸಿತು ನನಗೆ ಗೊತ್ತಿಲ್ಲ
ಜೋರಾಗಿ ಕಿರುಚಿ ಹಾಳೆ ಹೊರೆಯನ್ನು ಬಿಸಾಕಿ
ಅಲ್ಲೇ ಬಿದ್ದಿದ್ದ ಬೇಲಿ ಗೂಟವನ್ನು ತೆಗೆದುಕೊಂಡು
ಕೂಗಾಡುತ್ತ ಹುಲಿಯ ಹತ್ತಿರ ಹೋದೆ ಹುಲಿಗೂ ನನಗೂ ಇಪ್ಪತ್ತು ಅಡಿ ಅಂತರಅಲ್ಲಿದ್ದೆವು .
ಹುಲಿಯು ನನ್ನನ್ನು ಒಮ್ಮೆ ನೋಡಿ ಕರುವಿನ ಕುತ್ತಿಗೆಯನ್ನು ಬಿಟ್ಟು ಮತ್ತೊಮ್ಮೆ ನಿಂತು ನನ್ನ ನೋಡಿ ಪಕ್ಕದಲ್ಲೇ ಇದ್ದ ibx ಬೇಲಿಯನ್ನು ಚಂಗನೆ ಹಾರಿ ಧೈರ್ಯದಿಂದ ಕಾಡಿಗೆ ಹೋಯಿತು.
ಕರುವನ್ನು ನನ್ನ ತೊಡೆಯ ಮೇಲೆ ಮಲಗಿಸಿಕೊಂಡು
ಕರುವಿನ ಅರ್ಧ ಜೀವ ಹೋಗಿತ್ತು ಕಷ್ಟಪಟ್ಟು ಉಸಿರಾಡುತ್ತಿತ್ತು
ನನ್ನ ಕೂಗು ಕಿರುಚಾಟ ಕೇಳಿದ ದಾರಿಯಲ್ಲಿ ಹೋಗುತ್ತಿದ್ದ ಮುತ್ತಕ್ಕ
ಹಾಗು ಮನೆಯಿಂದ ಅಮ್ಮ ಓಡೋಡಿ ಬಂದರು ನನ್ನ ಸುತ್ತಮುತ್ತ ಹತ್ತಾರು ದನಕರುಗಳು ಮುತ್ತಿಕೊಂಡಿದ್ದವು ಬುಸು ಬುಸು ಉಸಿರು ಬಿಡುತ್ತಿದ್ದವು ಭಯದಿಂದ ದಿಕ್ಕಾಪಾಲು ಓಡಾಡುತ್ತಿದ್ದವು.
ಇದನ್ನು ನೋಡಿದ ಮುತ್ತಕ್ಕ ಮತ್ತು ಅಮ್ಮ ನನಗೆ ಏನೋ ಆಗಿದೆ ಎಂದು ತಿಳಿದು ಅಳಲಾರಂಭಿಸಿದರು ನನ್ನ ಮೈಕೈಯೆಲ್ಲಾ ರಕ್ತ
ಹತ್ತಿರ ಬಂದು ವಿಷಯ ತಿಳಿದ ನಂತರ ಮನೆಯಿಂದ ಕಾಡು ಕಾಳಜೀರಿಗೆ ಹಾಗೂ ಅರಿಶಿನ ತಂದು ಕರುವಿಗೆ ಹಚ್ಚಿದೆವು
ಆದರೆ ಕರುವು ಉಳಿಯುವ ಸ್ಥಿತಿಯಲ್ಲಿರಲಿಲ್ಲ ನೋಡನೋಡುತ್ತಲೇ ಕರುವಿನ ಪ್ರಾಣಪಕ್ಷಿ ಹಾರಿಹೋಗಿತ್ತು .
ಆದರೆ ಹುಲಿ ಅದರ ಅಹಾರವನ್ನು ಕಸೆದುಕೊಂಡ ನಮ್ಮ ಎಲ್ಲರನ್ನು ದೂರದಿಂದ ಗಮನಿಸುತಿತ್ತು ..


ಮುಂದೇನು ಮಾಡುವುದೆಂದು ಸತ್ತ ಕರುವನ್ನು ಹೂಳಲು
ಮುಂದಾದೆವು
ಆದರೆ ಹಸಿದ ಹುಲಿ ಕಾಡನ್ನು ಬಿಟ್ಟು ಹೋಗಿರುವುದಿಲ್ಲ .
ಹುಲಿ ಅದು ಬೇಟೆ ಮಾಡಿದ ಜಾಗಕ್ಕೆ ಮತ್ತೆ ಅದರ ಆಹಾರ ಹುಡುಕಿ ಬಂದೇ ಬರುವುದು.
ಅದರ ಆಹಾರ ಸಿಕ್ಕಿಲ್ಲ ಅಂದರೆ ಮತ್ತೆ ಬೇರೆ ಯಾವುದಾದರೂ ಧನ ಅಥವಾ ಸಾಕು ಪ್ರಾಣಿಯನ್ನು ಹಿಡಿದು ತಿನ್ನುವುದು ಎನ್ನುವ ಉದ್ದೇಶದಿಂದ ಎಲ್ಲರ ಸಲಹೆ ಮೇರೆಗೆ ಕರುವನು ಮಣ್ಣು ಮಾಡದೆ ಗದ್ದೆಯಲ್ಲಿಯೇ ಹಾಗೆ ಬಿಟ್ಟೆವು.
ಹಾಗೆಯೇ ಎಂದಿನಂತೆ ನಾನು ಸಂಜೆಯ ವೇಳೆಗೆ ಕ್ರಿಕೆಟ್ ಆಡಲು ನಮ್ಮ ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಇರುವ ಆಟದ ಮೈದಾನಕ್ಕೆ ಹೋದೆ
ಆಟ ಆಡಿದ ನಂತರ ಹುಲಿಯ ವಿಷಯವನ್ನು ಹೇಳಿದೆ.
ನಮ್ಮ ಸ್ನೇಹಿತರೆಲ್ಲರೂ ಕುತೂಹಲದಿಂದ ಒಂದಾಗಿ ಕರುವನ್ನು ನೋಡಲು ಸುಮಾರು 7ಗಂಟೆಯ ಸಂಜೆಯಲ್ಲಿ ನಮ್ಮ ಮನೆಯ ಗದ್ದೆಗೆ ಬಂದರು ನಾನು ಅವರೊಂದಿಗೆ ಸೇರಿ ಟಾರ್ಚ್ ಹಿಡಿದು
ಹುಲಿ ಕರುವನ್ನು ಹಿಡಿದ ಜಾಗಕ್ಕೆ ಹೋದೆವು.
ಕರು ಸತ್ತು ಹೋಗಿರುವ ಜಾಗದಲ್ಲಿ ಇರಲಿಲ್ಲ
ಕರುವನ್ನು ಎಳೆದುಕೊಂಡು ಹೋಗಿರುವ ಕುರುಹಿನ ಜಾಡು ಹಿಡಿದು ಮುಂದೆ ಹೋದೆವು ಸುಮಾರು ಐವತ್ತು ಮೀಟರ್ ದೂರದಲ್ಲಿ ಅರ್ಧ ತಿಂದ ಸ್ಥಿತಿಯಲ್ಲಿ ಕರು ಸಿಕ್ಕಿತು.
ತಿಳಿಯಿತು ಹುಲಿ ಮತ್ತೆ ಬಂದು ಕರುವನು ಅರ್ಧ ತಿಂದು ಕಾಡಿಗೆ ಹೋಗಿದೆ ಎಂದು
ಕೈಯಲ್ಲಿರುವ ಟಾರ್ಚನ್ನು ಕಾಡಿನ ಕಡೆ ತಿರುಗಿಸಿ ನೋಡಿದೆವು.
ಟಾರ್ಚಿನ ಬೆಳಕಿಗೆ
ಗದ್ದೆಯ ಮೇಲಿರುವ ಧರೆಯ ಮೇಲೆ ಕಡು ಕೆಂಪು ಹಾಗೂ ಹಳದಿ ಮಿಶ್ರಿತ ಹುಲಿಯು ತನ್ನ ಕಣ್ಣನ್ನು ತೋರಿಸಿತು
ಬದುಕಿದ್ರೆ ಬಿಕ್ಷೆ ಬೇಡಿ ತಿನ್ನಬಹುದು ಅಂತ ಹೇಳಿ
ಎದ್ದನೋ ಬಿದ್ದನೋ ಅಂತ ಎಲ್ಲರೂ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದೆವು.
ಅದೇ ದಿನ ರಾತ್ರಿ ನಮ್ಮ ಶಿಕಾರಿಯ ಸ್ನೇಹಿತರೊಬ್ಬರು ನಮ್ಮ ಮನೆಗೆ ಬಂದು ಹುಲಿ ಇರುವ ಕಾಡಿನೆಡೆಗೆ ಗಾಳಿಯಲ್ಲಿ ಎರಡು ಗುಂಡುಹಾರಿಸಿದರು.
ಮರುದಿನ ಹುಲಿಯು ಇರಲಿಲ್ಲ ಕರುವಿನ ದೇಹವು ಇರಲಿಲ್ಲ.
ಅದಾದ ನಂತರ ಮತ್ತೆ ನಮ್ಮ ಮನೆಯ ಹತ್ತಿರವಾಗಲಿ ಕಾಡಿಗಾಗಲಿ ಹುಲಿ ಎಂದು ತಿರುಗಿ ಬಂದಿಲ್ಲ.
ಆ ಮನೆಯಲೊಂದು ಈ ನೆನಪು ಎಂದು ಮರೆಯುವ ಹಾಗಿಲ್ಲ.

ನೈಜ ಕಥೆ ✍️ ಪೃಥ್ವಿರಾಜ್ ಬಿ ಸ್.  ( 9686250557 )

( Pruthvikraj@gmail.com ) 


Comments