ದಿನಕ್ಕೊಂದು ಹಾರರ್ ಕಥೆ




"ಏ ನಿತ್ಕೋ ದೀಕ್ಷಾ ,ನಿಂತ್ಕೊಳೇ ಮಾರಾಯ್ತಿ. ದೀಕ್ಷಾ ದೀಕ್ಷಾ" ಎಂದು ಆಗಲೇ ಕತ್ತಲೆಯನ್ನ ಮೈ ತುಂಬಾ ಮೆತ್ತಿಕೊಳ್ಳುತ್ತಿದ್ದ ಪಾರ್ಕ್ ಒಂದರಲ್ಲಿ ಒಬ್ಬಾತ ದೀಕ್ಷಾ ಎಂದು ಕೂಗುತ್ತ ಓಡುತ್ತಿದ್ದ...
ಅವನನ್ನ ಹಿಂಬಾಲಿಸಿದ ಮನೋಜ್ ,ಅವನು ಯಾರನ್ನೂ ಹಿಂಬಾಲಿಸುತ್ತಿಲ್ಲ ಎಂಬುದು ಮನದಟ್ಟಾದ ಮೇಲೆಯೇ,ಅವನನ್ನು ತಡೆದು,
"ಲೋ ಯಾರೂ ಇಲ್ವಲ್ಲೋ ಯಾರ್ ಹಿಂದೆ ಓಡ್ತಿದ್ದೀಯೋ ಮೆಂಟಲ್" ಎಂದು ಬೈದನು.
"ಸಾರ್,ದೀಕ್ಷಾ ಸಾರ್ ದೀಕ್ಷಾ ...ಬೆಳದಿಂಗಳ ಕಿಡಿ ಸರ್,ನನ್ ಬಿಟ್ಟು ಓಡ್ತಾ ಇದ್ದಾಳೆ ,ಪ್ಲೀಸ್ ಸರ್ ನಿಲ್ಲೋಕೆ ಹೇಳಿ" ಎನ್ನುತ್ತ ಆ ಯುವಕ ಮತ್ತೆ ಓಡಲು ಪ್ರಾರಂಭಿಸಿದನು.
ಅವನು ಅತ್ತ ಓಡುತ್ತಿದ್ದಂತೆ ಥೂ ಮೆಂಟಲ್ ಎಂದು ಹಿಂತಿರುಗಿದ ಮನೋಜ್ ನ ಎದುರು ರಫ್ಫನೆ ಎದುರು ಬಂದ ಸಿಡಿಲಿನಂತಹ ಕಣ್ಣೋಟದ ಹುಡುಗಿಯೊಬ್ಬಳು.
"ಶ್!ಸರ್ ಸುಮ್ನಿರಿ ,ಮೆಂಟಲ್ ಅವ್ನು ಆ ಕಡೆ ಓಡ್ಲಿ.ನಾನಿಲ್ಲಿ ಇದೀನಂತ ಹೇಳ್ಬೇಡಿ" ಎಂದಳು.
ಅವಳ ಮಾತನ್ನು ಕೇಳಿ ನಸು ನಕ್ಕ ಮನೋಜ್ ,ಛೆ.ಸುಮ್ನೆ ಮೆಂಟಲ್ ಅಂದೆ,ಈ ಲವ್ ಅನ್ನೋದೇ ಹೀಗೆ ಅರ್ಥಾನೆ ಆಗಲ್ಲ ಎನ್ನುತ್ತ ಪಾರ್ಕ್ ನ ಗೇಟಿನ ಬಳಿ ಬಂದಾಗ ಆಗಲೇ ಸೂರ್ಯ ಸಂಪೂರ್ಣ ಕತ್ತಲಿಗೆ ಶರಣಾಗಿ ,ಮಿಣುಕುವ ದೀಪವೊಂದು ಮನೋಜನನ್ನೇ ದಿಟ್ಟಿಸುತ್ತ ಕಂಗೊಳಿಸುತ್ತಿತ್ತು.
ಅಷ್ಟರಲ್ಲೇ ಮನೋಜನ ಎದೆಯ ಬಲವವ್ನೇ ನಡಗಿಸುವಂತೆ ಪಾರ್ಕ್ ನ ಗೇಟ್ ಹಾಕಿದ ಶಬ್ಧವಾಯಿತು,ವಾಚ್ ಮೆನ್ ಕಡೆ ಸ್ವಲ್ಪ ಕೋಪದಿಂದಲೇ ಸುಡುವಂತೆ ದಿಟ್ಟಿಸಿದ ಮನೋಜ್.
"ಒಳಗೆ ಇನ್ನಿಬ್ಬರಿದ್ದಾರಪ್ಪ,ಯಾರಿದ್ದಾರಂತ ನೋಡ್ದೆ ಹಾಗೇ ಗೇಟ್ ಹಾಕ್ ಬಿಡೋದ" ಎಂದು ಅಬ್ಬರಿಸಿದ.
ಮನೋಜನ ಮಾತಿಗೆ ಕಿರುನಗೆ ಬೀರಿದ ವಾಚ್ ಮೆನ್.
"ಈ ಊರಿಗೆ ಹೊಸಬನೇನೋ ಅನ್ಸತ್ತೆ,ಇವತ್ತು ಅಮವ್ಯಾಸೆ,ಸಂಜೆ ಆದ್ಮೇಲೆ ಈ ಪಾರ್ಕ್ ಗೆ ಯಾರೂ ಬರಲ್ಲ.ಹೋಗ್ ಹೋಗು ಮನೆ ಸೇರ್ಕೋ" ಎಂದು ಅಲ್ಲಿಂದ ನಡೆದು ಹೋದ .
ಏನೋ ಸಂಶಯ ಉಂಟಾಗಿ ಮೈಯಲ್ಲೊಂದು ನಡುಕ ಹುಟ್ಟಿ ,ತನ್ನ ನೆರಳನ್ನೇ ನೋಡಲು ಶಕ್ತಿ ಸಾಕಾಗದಿದ್ದರೂ ಗಟ್ಟಿ ಮನಸ್ಸು ಮಾಡಿ,ಗೇಟ್ ನ ಬಳಿ ಹೋಗಿ ನಿಂತು ಪಾರ್ಕ್ ನ ಒಳಗೆಲ್ಲಾ ದಿಟ್ಟಿಸಿದ ಮನೋಜ್ ಗೆ ...
ಕಡು ಕತ್ತಲು ಮಿಶ್ರಿತ ಮೌನವೇ ಗಹನತೆಯ ಕತೆಯೊಂದನ್ನ ಪಿಸುನುಡಿಯುತ್ತಿತ್ತು.ತಕ್ಷಣ ಸರಕ್ ಎಂದು ಇಲಿಯೊಂದು ಓಡಿದ ಸದ್ದು ಕೇಳಿ ಹೌಹಾರಿದ ಮನೋಜ,ಅಲ್ಲಿಂದ ಕಾಲ್ಕಿತ್ತವನು,ಎಂದಿಗೂ ಆ ಪಾರ್ಕ್ ಕಡೆ ತಲೆ ಹಾಕಿ ಮಲಗಲಿಲ್ಲ...

ಶುಭವಾಗಲಿ.
-"ನನ್ನ ಕೃಷ್ಣ"-ಸತ್ಯ ಹರಿಹರಪುರ.

Comments