ನಮ್ಮ ಮಲೆನಾಡ ಅಂದಿನ ಗೌರಿ ಗಣೇಶ

 

ನಮ್ಮ ಮಲೆನಾಡ ಅಂದಿನ ಗೌರಿ ಗಣೇಶ

ಸ್ನೇಹಿತರೆ ನಮಗೆಲ್ಲಾ ಮಲೆನಾಡು‌, ಮಲೆನಾಡಿನ ಸಂಸ್ಕೃತಿಗಳು, ಹಬ್ಬ ಹರಿದಿನಗಳು ಅಂದರೆ ನೆನಪಾಗೋದು ಹಳ್ಳಿ ಮನೆ ಬಾಗಿಲಿಗೆ ಹಾಕಿದ ಮಾವು ಹಲಸಿನ ತೊರಣ, ಮನೆಮುಂದೆ ದೊಡ್ಡದೊಂದು ಅಂಗಳ, ಆ ಅಂಗಳಕ್ಕೆ ಸಗಣಿಯಿಂದ ಸಾರಿಸಿ ದೊಡ್ಡದಾಗಿ ಬಿಡಿಸಿದ ರಂಗೋಲಿ, ಆ ರಂಗೋಲಿಗೆ ಬಣ್ಣ ಹಾಕಲು ತಾಮುಂದು ನಾಮುಂದು ಎಂದು ಕಿತ್ತಾಡುವ ಹೆಣ್ಣುಮಕ್ಕಳು, ಅಲ್ಲೇ  ಜೊತೆಗೆ ಬುಗುರಿ ಚಿನ್ನಿದಾಂಡು, ಗೋಲಿ ಆಡುತ್ತಿರುವ ಗಂಡುಮಕ್ಕಳು, ಮನೆತುಂಬ ಜನ ,ತೋಟದಲ್ಲಿ ಆಳುಕಾಳುಗಳು ಹೀಗೆ ಸಡಗರ ಸಂಭ್ರಮದ ವಾತಾವರಣ. ಇನ್ನು ಗಣೇಶ ಹಬ್ಬದ ದಿನದಂದೇ ಅಡಿಕೆ ಕೊನೆ ತೆಗೆಯಲು ಮುಹೂರ್ತ ಪೂಜೆ ಅಂದೇ. ಅಮ್ಮ ಅಡುಗೆ ಮನೆ ಬಿಟ್ಟು ಹೊರಬರುವುದೇ ಕಷ್ಟ. ಆ ಮದ್ಯದಲ್ಲಿ ಕಡುಬು, ಮೋದಕ,ಚಕ್ಕುಲಿ,ಪಂಚಕಜ್ಜಾಯ, ಹೋಳಿಗೆ,ಕೋಡುಬಳೆ‌,ನಿಪ್ಪಟ್ಟು,ತರಾವರಿ ತಿಂಡಿಗಳ ಪರಿಮಳ,ಮನೆ ಒಳಗೆ ಅಡುಗೆಕೆಲಸದಲ್ಲಿನಿರತ ಮಹಿಳೆಯರಾದರೆ, ಹೊರಗೆ ತೋರಣ, ದೇವರಿಗೆ ಮಂಟಪ, ಆ ಮಂಟಪಕ್ಕೆ ಅಲಂಕಾರ, ಫಲವಸ್ತು ಕಟ್ಟಿ ತಳಿರುತೋರಣಗಳಿಂದ ಅಲಂಕೃತವಾದ ಮಂಟಪದಲ್ಲಿ ಗೌರಿಗಣೇಶರನ್ನು ಸ್ವಾಗತಿಸುವಲ್ಲಿ ಪುರುಷರೂ ನಿರತರು. ಮನೆತುಂಬಾ ನೆಂಟರಿಷ್ಟರು, ಅವರಮಕ್ಕಳು ಇನ್ನು ಪಟ್ಟಣಕ್ಕೆ ಕೆಲಸದನಿಮಿತ್ತ ತೆರಳಿದ ಮಕ್ಕಳು ಸಂಸಾರ‌ ಸಮೇತ ಹಬ್ಬಕ್ಕೆ ಊರಿಗೆ ಹಾಜರ್.ಒಂಟಿಮನೆ, ಮನೆತುಂಬಾ ಜನ , ಹೀಗೆ ಪ್ರಾರಂಭ ನಮ್ಮ ಮಲೆನಾಡ‌ಗೌರಿಗಣೇಶ ಹಬ್ಬ. ಪಟ್ಟಣದ ಮಕ್ಕಳಿಗೆ ೧೦೮ ಗಣೇಶ ನೋಡುವ ಖುಷಿ ಇದ್ದರೆ, ನಮಗೆ‌ ಅದೆಲ್ಲಾ ಗೊತ್ತೇ ಇಲ್ಲ. ನಮ್ಮನೆ ಹೆಚ್ಚಂದರೆ ನಮ್ಮ ತೋಟ ದಾಟಿ ಇನ್ನೊಂದೆರಡು ಮನೆಗೆ‌ ಅಮ್ಮ ಕುಂಕುಮಕ್ಕೆ ಹೊದರೆ ಜೊತೆಗೆ ಹೋಗೋ ಅಭ್ಯಾಸ ಅಷ್ಟೇ. ನಮ್ಮ‌ಮನೆನೇ ನಮಗೆ ಪ್ರಪಂಚ. ನಮ್ಮ ತೋಟ ನಮ್ಮ ಗದ್ದೆ ನಮ್ಮ ಕಾಡು ಮನೆಲಿರೊ ನಾಯಿಮರಿ ಹಸು, ಕರು ಇವೇ ನಮ್ಮ ಗೆಳೆಯರು. ಗೌರಿ ಗಣೇಶ ಹಬ್ಬ ಅಂದರೆ ಅದೇ ಜೋರು ಹಬ್ಬ ನಮಗೆ ಬೆಳಿಗ್ಗೆ ಬೇಗ ಎದ್ದು ಮನೆ ಗುಡಸಿ ಸಾರಸಿ ರಂಗೋಲಿ ಹಾಕಿ ಹೊಸ ಬಟ್ಟೆ ತೊಟ್ಟು ರೆಡಿ ಆದರೆ ಮನೆ ಹಿರಿಯರದೇ ಪೌರೋಹಿತ್ಯ‌. ಉಳಿದೆಲ್ಲರೂ ಪೂಜೆ ಮಾಡಬೇಕು. ಹಿರಿಯರ ಮಾತೆ ವೇದವಾಕ್ಯ, ಅವರು ಹೇಳಿದ ಹಾಗೇ ಪೂಜೆಗೆ ಅಣಿ ಆಗುತ್ತಿತ್ತು, ಗೌರಿಗೆ ಗಣೇಶಂಗೆ ಇಷ್ಟದ ಅಡುಗೆಗಳು ರೆಡಿ ಆದರೆ ಮಕ್ಕಳಿಗೆ ತಿಂಡಿ ಇಲ್ಲ ಅನ್ನೋದೇ ಚಿಂತೆ. ವ್ರತ ಮುಗಿಯೋದೇ ತಡ ನೈವೇದ್ಯಕ್ಕೆ ಇಟ್ಟ ಹಣ್ಣುಗಳೇ ಫಲಹಾರ. ಮದ್ಯನ್ಹಕ್ಕೆ ರುಚಿಕರವಾದ ಬಗೆಬಗೆಯ ಖಾದ್ಯಗಳೊಂದಿಗೆ ಹಬ್ಬದ ಊಟ ಮುಗಿಸುವಾಗ ಸಂಜೆಗೆ ಪೂಜೆ ಜೊತೆಗೆ ಗಣಪತಿ ಬಿಡೋ ಸಂಭ್ರಮದೊಂದಿಗೆ ನಮ್ಮ ಮಲೆನಾಡ ಗೌರಿಗಣೇಶಕ್ಕೆ ತೆರೆ ಬೀಳುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕುಟುಂಬದ ವ್ಯಾಖ್ಯಾನವೇ ಬದಲಾದ ನಂತರ ಮನೆ ನಾನು ನನ್ನ ಹೆಂಡತಿ ಮಕ್ಕಳು ಒಟ್ಟಿಗೆ ಇರುವುದೇ ಹಬ್ಬವೇನೋ ಎನ್ನುವಂತಾಗಿದೆ.ಹಳ್ಳಿ ಮನೆಗಳಲ್ಲಿ ಹಿರಿಯರು ಮಾತ್ರ ವಾಸವಿದ್ದು ಮಕ್ಕಳು ಬರುತ್ತಾರೇನೋ ಎಂಬ ನಿರೀಕ್ಷೆಯೊಂದಿಗೆ ಪ್ರಾರಂಭವಾಗಿ ಮುಂದಿನ ಬಾರಿ ಬರಬಹುದೆಂಬ ಸಮಾದಾನದೊಂದಿಗೆ ಮುಗಿಯುತ್ತದೆ. ನಾನು ನನ್ನದು ನನ್ನತನ ಇರುವುದೇ ಈ ಹಳೆ ಸಂಪ್ರದಾಯದಲ್ಲಿ. ನಾವು ಹಬ್ಬಕ್ಕಾದರೂ ಒಟ್ಟಿಗೆ ಸೇರಿದರೆ ನಮ್ಮ ಮಕ್ಕಳಿಗೆ ಅವರ ಸಂಬಂದಿಗಳ ಪರಿಚಯವಾಗುತ್ತದೆ. ನಮ್ಮ ನೆರೆ ಹೊರೆ ಪ್ರೀತಿವಿಶ್ವಾಸಗಳ ಅರಿವಾಗುತ್ತದೆ. ಇದನ್ನರಿತು  ನಾವು ಹಬ್ಬಗಳನ್ನು ಒಗ್ಗಟ್ಟಾಗಿ ಸಂಭ್ರಮಿಸುವುದನ್ನು ಕಲಿಯಬೇಕಿದೆ. ನಮ್ಮ ಮಲೆನಾಡ ಸಂಸ್ಕೃತಿಗಳು ನಿಜಕ್ಕೂ ಅದ್ಬುತವಾಗಿದ್ದು ಪ್ರತಿ ಹಬ್ಬಗಳಿಗೂ ಅದರದೇ ಆದ ವೈಜ್ಞಾನಿಕ ಕಾರಣಗಳೂ ಸಹ ಇದೆ. ಹಾಗೂ ಹಬ್ಬಗಳಲ್ಲಿ ಬಳಸುವ ತರಕಾರಿಗಳು ಸಹಿ ಪದಾರ್ಥ ಗಳೊಂದಿಗೆ ಸಹ ವೈಜ್ಞಾನಿಕ ಹಾಗೂ ವೈಚಾರಿಕತೆ‌ ಅಡಗಿದೆ ಎಂಬುದನ್ನು ನಾವು ಗಮನಿಸಲೇ ಬೇಕು. ನಮ್ಮ ಸಂಸ್ಕೃತಿಯಲ್ಲಿ ನಾವು ಮಾಡುವ ಪ್ರತಿ ಹಬ್ಬಹರಿದಿನಗಳಿಗೆ‌ ಅದರದ್ದೇ ಆದ ಕಾರಣಗಳಿವೆ ಮತ್ತು   ಆಗಿನ ಹವಾಮಾನಕ್ಕೂ ಸಂಬಂದಿಸಿದಂತಿದೆ ಎಂಬುದು ಗಮನಾರ್ಹ ವಾದ ಸಂಗತಿಯಾಗಿದೆ.. ಇಂತಹ ಹಬ್ಬಗಳ ಸಾಲಿಗೆ ಭಾದ್ರಪದ ಶುದ್ದ ಚೌತಿ ದಿನ ಈ ಗಣೇಶನ ಹಬ್ಬ ಒಂದು. ಅವನಿಗಾಗಿ ಮಾಡುವ  ಮೋದಕ ಕಜ್ಜಾಯಗಳೊಂದಿಗೆ‌ ಎಲ್ಲರ‌ಮನೆ‌ ಹಾಗೂ ಮನಗಳಲ್ಲಿ ಸದಾ ಹರುಷ ತರಲಿ ಎಂದು ಬೇಡುತ್ತೇನೆ...

 ✍️ಚೇತನಾ.ಎಸ್.ಶೃಂಗೇರಿ

Comments

Post a Comment